ಮoಡ್ಯ: ಮಳವಳ್ಳಿ ಪಟ್ಟಣದಲ್ಲಿ ಸಿಐಟಿಯು ಸಂಘಟನೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬಹತ್ ಪ್ರತಿಭಟನಾ ರ‍್ಯಾಲಿ ವೇಳೆ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಹಿಳಾ ಸಂಘಟಕರು ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದರು.
ಸಿಎಂ ಯಡಿಯೂರಪ್ಪ ಬುಧವಾರ ಮೈಸೂರು ಜಿಲ್ಲೆಯ ಮುಡುಕುತೊರೆ ಭ್ರಮರಾಂಭಿಕ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾರ ಹವಾಮಾನ ವೈಪರಿತ್ಯ ಹಿನ್ನೆಲೆ ಹೆಲಿಕಾಪ್ಟರ್ ಬಿಟ್ಟು ಬೆಂಗಳೂರಿಗೆ ಮಳವಳ್ಳಿ ಮುಖಾಂತರ ರಸ್ತೆ ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿ ಮುಗಿಸಿ ತೆರಳುತ್ತಿದ್ದರು.
ಈ ವೇಳೆ ಸಿಎಂ ಪಟ್ಟಣ ಮಾರ್ಗವಾಗಿ ಹೋಗುವ ಮಾಹಿತಿ ತಿಳಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಮಂಜುಳಾ, ಸುಶೀಲ, ಮಹದೇವಮ್ಮ ಎಂಬುವರು ಪಟ್ಟಣದ ಅನಂತರಾಮ್ ವತ್ತದಲ್ಲಿ ಪೊಲೀಸ್ ಭದ್ರತೆಯ ನಡುವೆಯೂ ಏಕಾಏಕಿ ಸಿಎಂ ಸಂಚರಿಸುತ್ತಿದ್ದ ಕಾರಿಗೆ ಅಡ್ಡಲಾಗಿ ಹೋಗಲು ಯತ್ನಸಿದರು. ಇವರ ದಿಢೀರ್ ನಡೆಯಿಂದ ಪೊಲೀಸರು ವಿಚಲಿತಗೊಂಡು ತಡೆಯಲು ಮುಂದಾದರು. ಅಷ್ಟರಲ್ಲಿ ಸಿಎಂ ಕಾರು ಮುಂದೆ ಸಾಗಿತ್ತು. ಆದರೆ ಹಿಂಬದಿ ಬಂದ ಎಸ್ಕಾರ್ಟ್ ವಾಹನಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಸಿಎಂ ಯಡಿಯೂರಪ್ಪ ಅವರಿಗೆ ಧಿಕ್ಕಾರ ಎಂದು ಕೂಗಿದರು. ತಕ್ಷಣ ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು.