ಪಣಜಿ: ಇಂದು ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮೀಸಲಾತಿಯನ್ನು ಅವಲಂಭಿಸಿರದೇ, ಸ್ವಯಂಪ್ರೇರಿತರಾಗಿ ಮುದೆ ಬಂದು ರಾಜಕೀಯದಲ್ಲೂ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪೊಂಡಾ ಶಾಸಕ ರವಿ ನಾಯ್ಕ ಮನವಿ ಮಾಡಿದರು.
ಪೊಂಡಾದ ಕಾಂಗ್ರೆಸ್ ಸಭಾಗೃಹದಲ್ಲಿ ಅಖಿಲ ಗೋವಾ ಮಹಿಳಾ ಒಕ್ಕೂಟ ಆಯೋಜಿಸಿದ್ದ ಮಹಿಳಾ ಸಮಾವೇಶವನ್ನುಉದ್ಘಾಟಿಸಿ ರವಿ ನಾಯ್ಕ ಮಾತನಾಡುತ್ತಿದ್ದರು.
ಮೀಸಲಾತಿಯ ಆಧಾರದ ಮೇಲೆ ಮಹಿಳೆಯರು ರಾಜಕೀಯಕ್ಕೆ ಬರುವುದಕ್ಕಿಂತ ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಸಾಬೀತುಪಡಿಸಲು ತಾವಾಗಿಯೇ ರಾಜಕೀಯಕ್ಕೆ ಬರಬೇಕು. ಮಹಿಳೆಯು ಸಮಾಜ ಮತ್ತು ದೇಶವನ್ನು ಬೆಳೆಸಬಲ್ಲಳು. ಅದಕ್ಕಾಗಿ ಮಹಿಳೆಯರು ತಮ್ಮ ಕ್ರಿಯಾಶೀಲತೆಯನ್ನು ಸಾಬೀತುಪಡಿಸಲು ಮುಂದಾಗಬೇಕು ಎಂದು ರವಿ ನಾಯ್ಕ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಖಿಲ ಗೋವಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಚಲ್ ವೇರೆಕರ್ ಮಾತನಾಡಿ, ನಿನ್ನೆ ಮತ್ತು ಇಂದು ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಮಹಿಳೆಯರು ಪ್ರತಿಯೊಂದೂ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಸಾಬೀತುಪಡಿಸಬೇಕಾಗಿದೆ. ಹಿಂದಿನ ಕಾಲದಲ್ಲಿ ಪಿತೃಪ್ರಧಾನ ಸಂಸ್ಕ್ರತಿಯಲ್ಲಿ ಮಹಿಳೆಯರು ಸಾಕಷ್ಟು ನೊಂದಿದ್ದರು. ಆದರೆ ಇಂದು ಕುಟುಂಬಸ್ಥರು ಮಹಿಳೆಯರಿಗೆ ಬೆಂಬಲ ನೀಡುತ್ತಿದ್ದು ಮಹಿಳೆಯರು ತಮ್ಮ ಕೌಶಲ್ಯವನ್ನು ಸಾಬೀತುಪಡಿಸಬೇಕು ಎಂದು ಅಭಿಪ್ರಾಯಪಟ್ಟರು.