Advertisement

ವಾರಕರಿ ಸಂಪ್ರದಾಯದಲ್ಲಿ ಮಹಿಳೆಯರು

06:00 AM Jul 20, 2018 | |

ವಿಠ್ಠಲ’ “ವಿಠ್ಠಲ’ ಎನ್ನುತ್ತ ತಾಳದ ಝೇಂಕಾರದೊಂದಿಗೆ ಪಂಢರಾಪುರದತ್ತ ಸಾಗುವ “ವಾರಿ’ಯಲ್ಲಿ ಒಂದು ಲಕ್ಷಕ್ಕೂ ಮಿಕ್ಕಿದ ಜನರು ಇಪ್ಪತ್ತೂಂದು ದಿನಗಳಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಒಂದೆಡೆ ಸೇರುತ್ತಾರೆ.

Advertisement

“ಭಕ್ತಿ’ಗೆ ಎಲ್ಲಿಯ ಗಂಡು-ಹೆಣ್ಣು ಭೇದ! ಭಕ್ತರಲ್ಲಿ ಮಹಿಳೆಯರೂ ಅಪಾರ ಸಂಖ್ಯೆಯಲ್ಲಿ ತುಳಸಿಯನ್ನು ತಲೆಯ ಮೇಲೆ ಹೊತ್ತು, ಹಾಡುತ್ತ, ಓಡುತ್ತ ಮೈಮರೆಯುವುದು ನೋಡಲು ವಿಶೇಷ. ಇಲ್ಲಿ ಇಪ್ಪತ್ತು ವರುಷದ ಯುವತಿಯರೂ ಇದ್ದಾರೆ. ಅರವತ್ತರ ಮುದುಕಿಯರೂ (ಯುವತಿಯರನ್ನೂ ನಾಚಿಸುವಂಥ) ಇದ್ದಾರೆ. ಭಕ್ತಿಯ ಪಾರಮ್ಯ ಸಾರತೀನೋ ಎಂಬಂತೆ ಬರಿಗಾಲಲ್ಲಿ ನೂರಾರು ಮೈಲಿ ನಡೆದರೂ ದಣಿಯದ ಈ ಮಹಿಳೆಯರ ಭಗವತ್‌ ಪ್ರೀತಿಯನ್ನು ಕಣ್ಣಾರೆ ಕಂಡೇ ಆನಂದಿಸಬೇಕು. ಅಂತಹ ಭಾಗ್ಯ ನನಗೆ ಸಿಕ್ಕಿದ್ದು ಮರೆಯಲಾರೆ.

ವಾರಕರಿ ಸಂಪ್ರದಾಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹಾಗೂ ಮಧುರತೆಯ ಸಂಗಮ. ವಾರಕರಿ ಸಂಪ್ರದಾಯ ಸಂತ ಜ್ಞಾನೇಶ್ವರ, ಸಂತ ತುಕಾರಾಮ ಹಾಗೂ ಸಂತ ಏಕನಾಥ ಮಹಾರಾಜರ ಕಾಲದಲ್ಲಿ ಬಲು ವಿಶೇಷತೆ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡಿತು. ಹಿಂದಿ ಭಾಷೆಯಲ್ಲಿ ಸಂತ ಮೀರಾ, ಕನ್ನಡ ವಚನ ಸಾಹಿತ್ಯದಲ್ಲಿ ಅಕ್ಕಮಹಾದೇವಿಯರಂತೆ ಮರಾಠಿ ಅಭಂಗ ಸಾಹಿತ್ಯದಲ್ಲಿ ಭಂಗವಿಲ್ಲದ ಹಾಡುಗಳನ್ನು ರಚಿಸಿ, ವಿಠ್ಠಲನಲ್ಲಿ ಅಖಂಡ ಪ್ರೇಮ, ಭಕ್ತಿಯನ್ನು ಸಾರಿದವರು- ಸಂತ ಜಿನಾಬಾಯಿ, ಸಂತ ಸಕ್ಕೂಬಾಯಿ, ಸಂತ ಮುಕ್ತಾಬಾಯಿ ಮೊದಲಾದವರು.

ಜಿನಾಬಾಯಿ, ಕ್ರಿ.ಶ. 1350ರ ಕಾಲದಲ್ಲಿ ವಿಠ್ಠಲನನ್ನು ಭಕ್ತಿಯಿಂದ ಆರಾಧಿಸಿದ ಕೆಳಜಾತಿ ಸೇವಕ ಮಹಿಳೆ. ಆದರೆ, ಜಿನಾಬಾಯಿಯ ಔನ್ನತ್ಯ ಎಷ್ಟಿತ್ತೆಂದರೆ ಸಂತೆಯಾಗಿ ಮೆರೆದ ಈಕೆ 340ರಷ್ಟು ಅಭಂಗಗಳನ್ನು ರಚಿಸಿದ್ದು , ವಾರಕರಿ ಸಂಪ್ರದಾಯದಲ್ಲಿ ಅವು ಹಾಡಲ್ಪಡುತ್ತವೆ. ದಿನನಿತ್ಯ ಜನತೆ ಇವುಗಳನ್ನು ಸ್ಮರಿಸುತ್ತಾರೆ.

ಜಿನಾಬಾಯಿ ವಿಠ್ಠಲನಲ್ಲಿ ತಾಯಿಯನ್ನು, ತದನಂತರ ತನ್ನಲ್ಲೇ ವಿಠ್ಠಲನನ್ನು ಕಂಡುಕೊಂಡ ಸಂತರು. ಅದೇ ರೀತಿಯಲ್ಲಿ ಗಯ್ನಾಳಿ ಅತ್ತೆಯ ಕಷ್ಟಕೋಟಲೆಗಳಿಂದ ವಿಠ್ಠಲನೇ ಬಂದು ಸಂತ ಸಕ್ಕೂಬಾಯಿಯನ್ನು ರಕ್ಷಿಸಿದ್ದು ಇನ್ನೊಂದು ಉಹಾಹರಣೆ. ಸಂತ ಚೋಖಾಮೇಲಾ, ಸಂತ ಮುಕ್ತಾಬಾಯಿ, ಸಂತ ನಿರ್ಮಲಾ- ಹೀಗೆ ಮಹಿಳಾ ಭಕ್ತವೃಂದದಲ್ಲಿ ಶಿಖರಪ್ರಾಯರಾದವರು ಇನ್ನೂ ಇದ್ದಾರೆ.

Advertisement

ಗೋಪಾಳಪುರದಲ್ಲಿ ಸಂತ ಜಿನಾಬಾಯಿ ದೇವರಿಗೆ ಅರ್ಪಿಸಿದ ನೈವೇದ್ಯ ಸ್ವೀಕರಿಸಲು ವಿಠuಲನೇ ಬರುತ್ತಿದ್ದನಂತೆ. ಪಂಢರಾಪುರದಲ್ಲಿ ವಿಠಲ, ರಖುಮಾಯಿ ಮುಖ್ಯ ದೇವಾಲಯವನ್ನು ವೀಕ್ಷಿಸಿದ ಬಳಿಕ, ಗೋಪಾಳಪುರದಲ್ಲಿ ಜಿನಾಬಾಯಿಯ ದೇವಾಲಯ, ಗೋಪಾಲಕೃಷ್ಣ ವಿಠ್ಠಲ (ಮುಖವಿಠ್ಠಲನಂತೆ, ಕೈಯಲ್ಲಿ ಕೊಳಲು!)ನನ್ನು ನೋಡಿದಾಗ ಕನಕನಿಗೊಲಿದ ಉಡುಪಿ ಕೃಷ್ಣನ ತ್ರಿಭಂಗಿ ಮಧುರಾಕೃತಿ ಕಣ್ಮುಂದೆ ಮಿಂಚಿ ಮರೆಯಾದಂತಾಯ್ತು.

ಭಕ್ತಿಸಾಗರ ಕಡೆದು ನವನೀತ ಪಡೆದ ಪರಿಯನ್ನು ತಿಳಿಸುವ ಸಂತ ಜಿನಾಬಾಯಿಯ, ನೀರಿನಲ್ಲಿ ನವನೀತ ಕಡೆದ ಹಂಡೆ ಕಡುಗೋಲು ಎಳೆದಾಗ, ಆಕೆಯ ಭಕ್ತಿಯೋಗದ, ಸಮರ್ಪಣಾಭಾವದ ಪರಿ ಅದೆಷ್ಟಿರಬಹುದೆಂದು ಅರಿಯದಾದೆ. ಅದೇ ರೀತಿ ಸಕ್ಕೂಬಾಯಿಯ ಅಡುಗೆ ಮನೆ, ಅಡುಗೆಯ ಪರಿಕರಗಳನ್ನು ವೀಕ್ಷಿಸಿದಾಗ, ದೇವಾಲಯಗಳಲ್ಲಿ ದೇವರನ್ನು ಪಡೆದಂತೆ, ಅಡುಗೆಮನೆಯಲ್ಲಿಯೂ ತಮ್ಮ ಭಕ್ತಿ ಹಾಗೂ ಶರಣಾಗತಿಯಿಂದ ಭಗವಂತನ ಸಾಕ್ಷಾತ್ಕಾರ ಪಡೆದುದರ ಪರಿ ಕಂಡು ನಮೋ ಎಂದೆ.

ಮಹಾರಾಷ್ಟ್ರದಲ್ಲಿ ಭಕ್ತಿಯ ಆಂದೋಲನದಲ್ಲಿ ಮಹಿಳಾ ಸಂತರು ಪ್ರಾಧಾನ್ಯ ಪಡೆದಿರುವಂತೆ, ವಾರಕರಿ ಸಂಪ್ರದಾಯದಲ್ಲಿ ಹಿಂದಿನಿಂದ ಇಂದಿನವರೆಗೆ ಪುರುಷರಂತೆ ಮಹಿಳೆಯರಿಗೂ ಪ್ರಾಧಾನ್ಯ ಇದೆ. ತಲೆಯ ಮೇಲೆ ತುಳಸಿಯನ್ನು (ಪುಟ್ಟ ತುಳಸೀಕಟ್ಟೆ) ಹೊತ್ತು, ಕೈಬೀಸಿ ನಡೆಯುತ್ತ, ಹಾಡುತ್ತ, ನೂರಾರು ಮೈಲಿ ಬರಿಗಾಲಲ್ಲಿ ನಡೆಯುವ ಮಹಿಳೆಯರ ಮುಖದಲ್ಲಿ ಆಯಾಸವನ್ನು ಇನಿತೂ ಕಾಣಲಾಗದು. ಪ್ರತಿವರ್ಷವೂ ವಾರಕರೀ ಸಂಪ್ರದಾಯದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅವರ ದೇಹವೂ ಹುರಿಗಟ್ಟಿದೆ. ಮನಸ್ಸಲ್ಲೂ ಅದಮ್ಯ ಚೇತನ ತುಂಬಿದೆ.

ವಾರಿ ಎಂದರೆ ಅಲ್ಲೊಂದು ಶಿಸ್ತು, ಸಂಯಮ, ಭಕ್ತಿ, ಸಾತ್ವಿಕತೆಯ ಸಂಯಮವಿದೆ. ನೇಮ-ನಿಷ್ಠೆಗಳಿವೆ. ಸಾತ್ವಿಕ ಆಹಾರ ಸೇವನೆ, ಸತ್ಸಂಗ, ಸತ್‌ಚಿಂತನೆ- ಹೀಗೆ ಧಾರ್ಮಿಕ, ಆರೋಗ್ಯಕರ ಹಾಗೂ ಆಧ್ಯಾತ್ಮಿಕ ವಾತಾವರಣ. ಜೊತೆಗೆ ವಿಪುಲ ಸಾಂಸ್ಕೃತಿಕ ಸಮ್ಮಿಲನ, ವೈಭವ.

ರಿಂಗಣ
“ಮಾವುಲೀಚೆ ಅಶ್ವ’ ಎಂದು ಕರೆಯುತ್ತಾ ಮಹಿಳೆಯರು ಹಾಗೂ ಪುರುಷರು ಪರಸ್ಪರ ಕೈಹಿಡಿದು ವರ್ತುಲಾಕಾರ ಸುತುತ್ತಾರೆ. “ರಿಂಗಣ’ವೇ ಒಂದು ಸಂಕಲ್ಪ.

ಧಾವಾ
ಸಂತ ತುಕಾರಾಮರು ವಿಠuಲನನ್ನು ದರ್ಶಿಸಲು ದೇವಾಲಯದ ಗೋಪುರ ನೋಡಿದ ಬಳಿಕ ಓಡೋಡಿ ಬಂದರಂತೆ. ಅದರ ಸ್ಮರಣೆಯಲ್ಲಿ ಇಂದು ಕೂಡಾ ವೇಳಾಪುರದಿಂದ ಪಂಢರಾಪುರದವರೆಗೆ “ವಾರೀ’ಯಲ್ಲಿ ಸ್ತ್ರೀಯರು, ಪುರುಷರೂ ಓಡೋಡಿ ಬರುತ್ತಾರೆ.

ವಾರೀಯಲ್ಲಿ ಎರಡು ವಿಧಗಳಿವೆ.
ಆಷಾಢೀ ವಾರೀ: ಆಷಾಢ ಮಾಸದ ಸಮಯದಲ್ಲಿ ಬೇರೆ ಬೇರೆ ಗ್ರಾಮಗಳಿಂದ ವಾರೀ ಬಂಧುಗಳು ಪಂಢರಾಪುರಕ್ಕೆ ಬರುತ್ತಾರೆ. ವಿವಿಧ ಪಲ್ಲಕ್ಕಿಗಳನ್ನು ಹೊತ್ತು ತರುತ್ತಾರೆ.

ಕಾರ್ತಿಕೀ ವಾರೀ: ಕಾರ್ತಿಕ ಮಾಸದಲ್ಲಿ ಪಂಢರಾಪುರದಿಂದ ವಾರೀ ಬಂಧುಗಳು ತಮ್ಮ ಗ್ರಾಮಗಳತ್ತ ತೆರಳುತ್ತಾರೆ.
ವಾರಕರೀ ಸಂಪ್ರದಾಯದ ಮೂಲಕ ಮಹಿಳೆಯರು ನವವಿಧ ಭಕುತಿಯ ವಿವಿಧ ಮಜಲುಗಳೊಂದಿಗೆ ಮಿಳಿತಗೊಳ್ಳುತ್ತಲೇ ಇರುತ್ತಾರೆ.

ದೇವರ ನಾಮಜಪ, ಸಂಕೀರ್ತನೆ, ಭಜನೆ ಶ್ರವಣ, ಆರಾಧನೆ, ಆತ್ಮ ನಿವೇದನೆ ಮೊದಲಾದವುಗಳೊಂದಿಗೆ ವಾರೀಯಲ್ಲಿ ತಮ್ಮನ್ನೇ ಮರೆಯುವ ಮಹಿಳೆಯರು “ವಿಠ್ಠಲ ಮಾವುಲೀ’ ಎಂದು ವಿಠ್ಠಲನನ್ನೇ ತಮ್ಮ ತಾಯಿಯೆಂದು ಪ್ರೀತಿಯಿಂದ ಕರೆಯುತ್ತಾರೆ.

“ಚಲಗ್‌ ಸಖೇ ಚಲಗ್‌ಸಖೇ ಪಂಢರಿಲಾ’ ಎನ್ನುತ್ತ ಪಂಢರಾಪುರದತ್ತ ಸಾಗುವಾಗ, ತಮ್ಮ ತವರು ಮನೆಯತ್ತ ನಡೆಯುವಂತೆ ಪ್ರೀತಿ, ಪ್ರೇಮ, ಮಮತೆ ವ್ಯಕ್ತಪಡಿಸುತ್ತಾರೆ. ವಾರಕರೀ ಸಂಪ್ರದಾಯದ ಸಾರವೇ ಬಹಿರ್‌-ಅಭ್ಯಂತರದಲ್ಲಿ ಅರ್ಥಾತ್‌ ಹೊರಗೂ ಒಳಗೂ ಎಲ್ಲೆಲ್ಲೂ ವಿಠuಲನನ್ನೇ ಕಾಣುವುದು.

ಪಂಢರಾಪುರದಲ್ಲಿ ವಿಠ್ಠಲನನ್ನು ದರ್ಶಿಸುವುದರ ಜೊತೆಗೆ “ಕಾಯಾ ಹೀ ಪಂಢರೀ ಆತ್ಮಹಾ ವಿಠ್ಠಲ’ ಎನ್ನುತ್ತಾ ತನ್ನೊಳಗೇ ವಿಠ್ಠಲನನ್ನು ಕಾಣುವ- ತನ್ನ ದೇಹವೇ ಪಂಢರಾಪುರ, ಆತ್ಮವೇ ವಿಠ್ಠಲ ಎನ್ನುವ ಗಹನ ತಣ್ತೀವನ್ನು ಸಾಕ್ಷಾತ್ಕರಿಸಿಕೊಳ್ಳುವುದು ನಿತ್ಯ ಸತ್ಯ.

ಮಹಿಳಾ ಸಂತರಿಗೂ, ವಾರಕರೀ ಸಂಪ್ರದಾಯ ಮುನ್ನಡೆಸಿದ, ಮುನ್ನಡೆಸುತ್ತಿರುವ ಮಹಿಳೆಯರಿಗೂ ವಿಶೇಷ ವಂದನೆ, ಆಷಾಢ ಮಾಸದಲ್ಲಿ !

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next