ಮರ್ಸಿಯ (ಸ್ಪೇನ್): ಭಾರತದ ವನಿತಾ ಹಾಕಿ ತಂಡ ಐರ್ಲೆಂಡ್ ವಿರುದ್ಧದ ದ್ವಿತೀಯ ಸೌಹಾರ್ದ ಪಂದ್ಯದಲ್ಲಿ 3-0 ಅಂತರದಿಂದ ಗೆಲುವು ದಾಖಲಿಸಿ ಸ್ಪೇನ್ ಪ್ರವಾಸವನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ನವ್‌ಜೋತ್ ಕೌರ್, ರೀನಾ ಕೋಖರ್ ಹಾಗೂ ಗುರ್‌ಜೀತ್ ಕೌರ್ ಗೋಲು ಹೊಡೆದು ಭಾರತಕ್ಕೆ ಗೆಲುವು ತಂದಿತ್ತರು.
ಪಂದ್ಯದ ಆರಂಭದಲ್ಲೇ ಆಕ್ರಮಣನ ಆಟಕ್ಕಿಳಿದ ಭಾರತ 13ನೇ ನಿಮಿಷದಲ್ಲಿ ನವ್‌ಜೋತ್ ಕೌರ್ ಅವರ ಗೋಲಿನಿಂದ 1-0 ಮುನ್ನಡೆ ಸಾಧಿಸಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ಐರ್ಲೆಂಡ್‌ಗೆ ಪೆನಾಲ್ಟಿ ಕಾರ್ನರ್ ಲಭಿಸಿತಾದರೂ ಭಾರತದ ರಕ್ಷಣಾಪಡೆ ಎದುರಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. 26ನೇ ನಿಮಿಷದಲ್ಲಿ ದೀಪಾ ಗ್ರೆಸ್ ಎಕ್ಕಾ ಅವರ ನೆರವಿನಿಂದ ರೀನಾ ಕೋಖರ್ ಗೋಲು ಬಾರಿಸಿ ಅಂತರವನ್ನು ಏರಿಸಿದರು.
ತೃತೀಯ ಕ್ವಾರ್ಟರ್‌ನಲ್ಲಿ ಮತ್ತೆ ಐರ್ಲೆಂಡ್‌ಗೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಇದೂ ವ್ಯರ್ಥವಾಯಿತು. ಅಂತಿಮ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ದಕ್ಕಿಸಿಕೊಂಡ ಭಾರತ ಗುರ್‌ಜೀತ್ ಕೌರ್ ಅವರ ನೆರವಿನಿಂದ 3ನೇ ಗೋಲು ದಾಖಲಿಸಿತು. ಇದರೊಂದಿಗೆ ಐರ್ಲೆಂಡ್ ಎದುರಿನ 2 ಪಂದ್ಯಗಳ ಸೌಹಾರ್ದ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದಿದೆ. ಮೊದಲ ಪಂದ್ಯ ಡ್ರಾಗೊಂಡಿತ್ತು.