ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಮಹಿಳೆಯರಿಗೆ ಕೊಡುತ್ತಿರುವಷ್ಟು ವಿಶೇಷ ಗೌರವ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲ. ದೇಶ ರಕ್ಷಣೆ ಮಾಡುವಲ್ಲಿ ಮಹಿಳೆಯರ ಪಾತ್ರ ಕೂಡ ಪ್ರಮುಖವಾಗಿದೆ. ಭಾರತದಲ್ಲಿ ಮಾತ್ರ ಮಹಿಳೆಯನ್ನು ತಾಯಿ ಎಂದು ಕರೆಯಲಾಗುತ್ತಿದೆ. ತಾಯಿ ಎಂಬ ಪದಕ್ಕೆ ಆಳ ಮತ್ತು ವಿಶಾಲವಾದ ಅರ್ಥವಿದೆ. ಆದ್ದರಿಂದಲೇ ಮಹಿಳೆಯನ್ನು ತಾಯಿ ಎಂದು ಕರೆಯಲಾಗುತ್ತಿದೆ ಎಂದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದ ಸಂದರ್ಭದಲ್ಲಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ನಮ್ಮ ದೇಶ ಯುದ್ಧದಲ್ಲಿ ಗೆಲುವು ಸಾಧಿಸಲಿದೆ. ಏಕೆಂದರೆ ನಮ್ಮ ದೇಶದ ಪ್ರಧಾನಿಯಾಗಿರುವ ಇಂದಿರಾಗಾಂಧಿಯವರು ದುರ್ಗಿಯಂತೆ ಮುನ್ನುಗುತ್ತಾರೆ. ಅವರೊಂದಿಗೆ ನಾವೆಲ್ಲರೂ ಜೊತೆಗೂಡೋಣ. ಶತ್ರು ಸೈನ್ಯವನ್ನು ಮಟ್ಟ ಹಾಕೋಣ ಎಂಬ ಮಾತನ್ನು ಹೇಳಿದ್ದರು ಎಂದು ನೆನಪಿಸಿಕೊಂಡರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರುಷನಿಗೆ ಸಮನಾಗಿ ಕೂಡ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಕೂಡ ಮಹಿಳೆಯರ ಪಾತ್ರ ಗಣನೀಯವಾಗಿದೆ. ಕ್ರೀಡಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದರು.
ಇದೇ ಪ್ರಥಮ ಬಾರಿಗೆ ನೌಕರರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಮಹಿಳಾ ಸಿಬ್ಬಂದಿಗೆ ಓಓಡಿಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮತ್ತೂರಿನ ಎಚ್.ಆರ್. ಕೇಶವಮೂರ್ತಿ, ಇಂದುಮತಿ ಸಾಲಿಮಠ್, ನೌಕರರ ಸಂಘದ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಮೋಹನ್ ಕುಮಾರ್, ಕೃಷ್ಣಮೂರ್ತಿ, ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.