Advertisement

ಮಹಿಳೆಯರ ಸಾಧನೆಗೆ ನೂರೆಂಟು ತೊಡಕು

02:52 PM Jan 23, 2018 | |

ವಿಜಯಪುರ: ಜಾಗತಿಕ ಮಟ್ಟದಲ್ಲಿ ಮಹಿಳಾ ಶಿಕ್ಷಣ ಕುರಿತು ಒತ್ತಾಸೆಯ ಮಾತುಗಳು ಕೇಳಿ ಬಂದರೂ ಈವರೆಗೆ 16 ದಶಲಕ್ಷ ಬಾಲಕಿಯರು ಬಾಗಿಲು ಬಡಿದಿಲ್ಲ. ಮತ್ತೂಂದೆಡೆ ಮಹಿಳೆ ಸಾಧನೆ ಹಾದಿಯಲ್ಲಿ ಹಲವು ತೊಡರುಗಳನ್ನು
ಎದುರಿಸಬೇಕಿದ್ದು, ಮಹಿಳೆಯ ಸಾಧನೆ ಹಾದಿ ಸುಲಭವಾಗಿಲ್ಲ ಎಂದು ಪುಣೆಯ ಸಿಂಬಯಾಸಿಸ್‌ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಡಾ| ಶಶಿಕಲಾ ಗುರುಪುರ ವಿಷಾದ ವ್ಯಕ್ತಪಡಿಸಿದರು.

Advertisement

ಸೋಮವಾರ ವಿಜಯಪುರದ ತೊರವಿ ಬಳಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಒಂಬತ್ತನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆಯಲ್ಲಿ
ಅತ್ಯಂತ ಕೆಳಮಟ್ಟದಲ್ಲಿ ಸೌದಿ ಅರೇಬಿಯಾ ದೇಶವಿದೆ. ಆದರೆ ಆ ದೇಶದಲ್ಲೇ ವಿಶ್ವದ ಅತಿ ದೊಡ್ಡ ಮಹಿಳಾ ವಿಶ್ವವಿದ್ಯಾಲಯ ಇರುವುದು ಮಾತ್ರ ವಿಪರ್ಯಾಸದ ಸಂಗತಿ. ಸೌದಿಯ ರಾಜ ಮನೆತನದ ಮಹಿಳೆಯರು ಇಂತಹ ಅಡೆತಡೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ವಿಶ್ಲೇಷಿಸಿದರು.

ಇದರ ಹೊರತಾಗಿಯೂ ಹೆತ್ತವರು ಕಂಡ ಕನಸನ್ನು ನನಸಾಗಿಸಿರುವ ಮಹಿಳೆಯರು ಅಸಾಧ್ಯವಾದುದನ್ನು ಸಾಧಿಸಿದ್ದೀರಿ. ನೀವು ಪಡೆದ ಶಿಕ್ಷಣ, ಜ್ಞಾನ ಸಮಾಜಕ್ಕೆ ಲಭ್ಯವಾಗಲಿ. ನಿಮ್ಮ ಜ್ಞಾನ ಬದುಕಿನ ಯಶಸ್ಸಿಗೆ ಶೇ.15ರಷ್ಟು ಮಾತ್ರ ಕಾರಣವಾಗಿದ್ದರೆ, ಉಳಿದಂತೆ ನಿಮ್ಮ ಯಶಸ್ಸು, ಸಂವಹನ ಸಾಮರ್ಥ್ಯ, ತಂಡದಲ್ಲಿ ಕಾರ್ಯ ನಿರ್ವಹಿಸುವ ಪ್ರವೃತ್ತಿ, ನಾಯಕತ್ವದಗುಣ, ನಿರ್ವಹಣೆ ಕೌಶಲ್ಯಗಳು ಕಾರಣವಾಗುತ್ತವೆ. ಅದನ್ನು ಮೈಗೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಆತ್ಮವಿಶ್ವಾಸದಿಂದ ವರ್ತಿಸಿ. ದೃಢತೆಯಿಂದ ಮುನ್ನುಗ್ಗಿ. ಸೂಕ್ತ ಗುರಿ ಇಟ್ಟುಕೊಳ್ಳಿ.ಉದ್ದೇಶಿತ ಗುರಿಗಳನ್ನು ಸಾಧಿಸಿ. ಯೋಜನಾ ಬದ್ಧವಾಗಿರಿ. ನಿಮ್ಮ ನಂತರ ಅಧ್ಯಯನ ನಡೆಸುವವರನ್ನು ಬೆಂಬಲಿಸಿ, ಪ್ರೋತ್ಸಾಹಿಸಿ. ಅಧ್ಯಯನ ಮಾಡಬಯಸುವ ಇತರರನ್ನೂ ಪ್ರೋತ್ಸಾಹಿಸಿ ಎಂದರು.

5ನೇ ತರಗತಿಯಲ್ಲಿದ್ದಾಗ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದ ವಿನ್‌ಸ್ಟನ್‌ ಚರ್ಚಿಲ್‌ ತನ್ನ 62ನೇ ವಯಸ್ಸಿನಲ್ಲಿ ಪ್ರಧಾನಿಯಾದ ಮತ್ತು ಜಾಗತಿಕ ರಾಜಕಾರಣದಲ್ಲಿ ಪ್ರಾಮುಖ್ಯತೆ ಪಡೆದಿದ್ದ. ಸ್ಟೀವ್‌ ಜಾಬ್ಸ್ ಅವರು ಥಾಮಸ್‌ ಅಲ್ವಾ ಎಡಿಸನ್‌ನ ಹಾಗೆ ಸೋಲುಗಳಿಂದ ಪಾಠ ಕಲಿತೆ ಎಂದು ಹೇಳಿದ್ದರು. ಕಲಿಯಲು ಬಯಸುವ ಮಹಿಳೆಯರನ್ನು
ಪ್ರೋತ್ಸಾಹಿಸಿ ಅವರಿಗೆ ಮಾರ್ಗದರ್ಶನ ಮಾಡಿ ಎಂದು ಸಲಹೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳಿಸಿ ತೇರ್ಗಡೆಯಾದ ಒಟ್ಟು 56 ವಿದ್ಯಾರ್ಥಿನಿಯರಿಗೆ 66 ಚಿನ್ನದ ಪದಕ ವಿತರಿಸಲಾಯಿತು. 21 ವಿದ್ಯಾರ್ಥಿನಿಯರಿಗೆ ಪಿಎಚ್‌ಡಿ, 14
ವಿದ್ಯಾರ್ಥಿನಿಯರಿಗೆ ಎಂಫಿಲ್‌ ಪದವಿ ಪ್ರದಾನ ಮಾಡಲಾಯಿತು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಬಿಹಾ ಭೂಮಿಗೌಡ, ಕುಲಸಚಿವ ಪ್ರೊ| ಎಲ್‌.ಆರ್‌. ನಾಯಕ, ಮೌಲ್ಯಮಾಪನ ಕುಲಸಚಿವ ಪ್ರೊ| ಎಸ್‌.ಬಿ. ಮಾಡಗಿ ಸೇರಿದಂತೆ ಸಿಂಡಿಕೇಟ್‌ ಸದಸ್ಯರು, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರು, ವಿವಿಧ ನಿಕಾಯಗಳ ಡೀನ್‌ರು, ವಿವಿಧ ವಿಭಾಗಗಳ ಮುಖ್ಯಸ್ಥರು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಅಭಿವೃದ್ಧಿಯತ್ತ ಮಹಿಳಾ ವಿವಿ ದಾಪುಗಾಲು
ವಿಜಯಪುರ:
ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಟಾಗಿಲು ತೆರೆದಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಮತ್ತು ಹೊಸ ಹೊಸ ಅಭಿವೃದ್ಧಿ ಕಾರ್ಯಗಳನ್ನು
ಕೈಗೊಳ್ಳುತ್ತಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಬಿಹಾ ತಿಳಿಸಿದರು.

ಸೋಮವಾರ ಜರುಗಿದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, 227 ವಿದ್ಯಾರ್ಥಿಗಳಿಂದ ಆರಂಭವಾದ ರಾಜ್ಯದ ಮೊಟ್ಟ ಮೊದಲ ಮಹಿಳಾ ವಿಶ್ವವಿದ್ಯಾಲಯ ಎಂಬ ಹಿರಿಮೆಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ 2,700ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆ. 

ವಿದ್ಯಾರ್ಥಿನಿಯರ ಆಸಕ್ತಿಕರ ಅಧ್ಯಯನಕ್ಕಾಗಿ 32 ಕೋರ್ಸುಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಇದೀಗ ನಮ್ಮ ವಿಶ್ವವಿದ್ಯಾಲಯ ರಾಜ್ಯದಾದ್ಯಂದ ವಿಸ್ತಾರ ಕಂಡಿದ್ದು, ಮಂಡ್ಯ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆದು ಅಭಿವೃದ್ಧಿ ಪಡಿಸುತ್ತಿದೆ. ಇದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪ್ರಗತಿಯ ಪ್ರತೀಕ ಎಂದರು. 

ಜ್ಞಾನ ಸಂಪಾದಿಸುವ ಆಸಕ್ತಿಯುಳ್ಳ ಮಹಿಳೆಯರು, ಉನ್ನತ ಶಿಕ್ಷಣವನ್ನು ಪಡೆಯುವ ಹಂಬಲ ಮತ್ತು ಬಲವನ್ನು ಹೊಂದಿದವರಿಗೆ 2006-07ರಿಂದ ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈವರೆಗೆ 350ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಿಎಚ್‌ಡಿ ಅಧ್ಯಯನಕ್ಕೆ ಹೆಸರು ನೋಂದಾಯಿಸಿಕೊಂಡು ವಿವಿಧ ವಿಷಯಗಳ ಮೇಲೆ ಸಂಶೋಧನೆ ಕಾರ್ಯ ಕೈಗೊಂಡಿದ್ದಾರೆ ಎಂದು ಹೇಳಿದರು.
 
ವಿಶ್ವವಿದ್ಯಾಲಯದಲ್ಲಿ 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು 32 ಸ್ನಾತಕೋತ್ತರ, 11 ಪದವಿ ಮತ್ತು 7 ಡಿಪ್ಲೋಮಾ ಮತ್ತು 10 ಸರ್ಟಿಫಿಕೇಟ್‌ ಕೋರ್ಸುಗಳಿಗಾಗಿ ತಮ್ಮ ಅವ ಧಿ ಕೊನೆಯ ಪರೀಕ್ಷೆಗಳಿಗೆ ಹಾಜರಾಗಿದ್ದರು. ಈ ಘಟಿಕೋತ್ಸವದಲ್ಲಿ 9 ಸಾವಿರ ಪದವೀಧರರು ವಿವಿಧ ಪದವಿ ಪಡೆದಿದ್ದಾರೆ. 56 ವಿದ್ಯಾರ್ಥಿಗಳಿಗೆ 66 ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. 21 ಸಂಶೋಧಕರಿಗೆ ಪಿಎಚ್‌ಡಿ, 14 ವಿದ್ಯಾರ್ಥಿಗಳು ಎಂಫಿಲ್‌ ಪದವಿ ಪಡೆಯುತ್ತಿರುವುದು ಮಹಿಳಾ ಶಿಕ್ಷಣದ ಪ್ರಗತಿಯ ಸೂಚಕ ಎಂದು ಹೆಮ್ಮೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next