ಬೆಂಗಳೂರು: ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು ಸುಕನ್ಯಾ ಸಂವೃದ್ದಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸ್ತ್ರೀ ಸಂಕುಲಕ್ಕಾಗಿ ಪರಿಚಯಿಸಿದೆ ಎಂದು ಕೇಂದ್ರ ಸಚಿವೆ ಸಾಧ್ವಿನಿರಂಜನ್ ಜ್ಯೋತಿ ಹೇಳಿದ್ದಾರೆ.
ಹೆಗಡೆನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಹಣಕಾಸು ಸಾಕ್ಷರತೆ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರ ಸಲೀಕರಕಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಮಹಿಳೆಯರನ್ನು ಆರ್ಥಿಕ ಸಾಕ್ಷರರನ್ನಾಗಿ ಮಾಡಿದರೆ ಆ ಕುಟುಂಬ ಕೂಡ ಆರ್ಥಿಕವಾಗಿ ಸದೃಢವಾಗಲಿ ಎಂಬ ಸದುದ್ದೇಶ ಇದರಲ್ಲಿ ಸೇರಿದೆ. ಆ ಹಿನ್ನೆಲೆಯಲ್ಲಿ ಜನ್‌ಧನ್ ಯೋಜನೆ ಸೇರಿದಂತೆ ಹಲವು ಮಹಿಳಾ ಪರ ಕಾರ್ಯಕ್ರಮ ರೂಪಿಸಿದೆ.
ಕೋವಿಡ್ ವೇಳೆ ಜನ್‌ಧನ್ ಯೋಜನೆ ಜನರಿಗೆ ಅನುಕೂಲವಾಯಿತು ಎಂದು ತಿಳಿಸಿದರು. ಈ ಹಿಂದೆ ಮಹಿಳೆಯರಾದಿಯಾಗಿ ಬ್ಯಾಂಕ್‌ಗಳ ಮುಂದೆ ಹೋಗಿ ಕುಳಿತು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ಯೋಜನೆ ಜಾರಿಗೆ ತಂದಿತು. ಇದು ಸಾಕಷ್ಟು ರೀತಿಯಲ್ಲಿ ಜನರಿಗೆ ಅನುಕೂಲವಾಯಿತು. ಜನರು ಬ್ಯಾಂಕ್ ಮುಂದೆ ಹೋಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿಯನ್ನು ಡಿಜಿಟಲ್ ಯೋಜನೆ ತಪ್ಪಿಸಿತು ಎಂದು ಹೇಳಿದರು.
ರಾಜ್ಯಕೌಶಲ್ಯ ಅಭಿವೃದ್ದಿ ನಿಗಮದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಮಹಿಳೆ ಉದ್ಯಮಿಗಳ ಸಬಲೀಕರಣಕ್ಕೆ ಆದ್ಯತೆ ನೀಡಿದ್ದು ಆ ನಿಟ್ಟಿನಲ್ಲೆ ಕಾರ್ಯ ಪ್ರವೃತ್ತವಾಗಿದೆ. ಮಹಿಳೆಯರು ಕೂಡ ಹಲವು ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿ ಆಗುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ ಎಂದು ಹೇಳಿದರು.
ಬ್ಯಾಂಕ್ ಆಫ್ ಬರೋಡಾದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಯ್ ಕೆ.ಖುರಾನ ಮಾತನಾಡಿ, ಬ್ಯಾಂಕ್‌ಗಳ ವತಿಯಿಂದ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಸೈಬರ್ ವಂಚನೆ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆ ನೀಡುವ ಕೆಲಸವೂ ನಡೆಯಬೇಕಾಗಿದೆ ಎಂದು ತಿಳಿಸಿದರು.
ದೇಶದ ವಿವಿಧ ರಾಜ್ಯಗಳ ಸುಮಾರು 350 ಪ್ರತಿನಿಧಿಗಳು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕರು, ಖಾಸಗಿ ಸಾರ್ವಜನಿಕರು ವಲಯದ ಬ್ಯಾಂಕ್‌ಗಳು, ಸ್ವ ಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಗ್ರಾಮೀಣ ಜೀವನೋಪಾಯ ವಿಭಾಗದ ಜಂಟಿ ಕಾರ್ಯದರ್ಶಿ ನೀತಾ ಕೇಜ್ರಿವಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.