Advertisement

ಮಹಿಳೆಯರೇ,ಹಿಂದೆ ಬೀಳದಿರಿ ನೀವೂ ಹಣ  ಹೂಡಿ

06:00 AM Aug 06, 2018 | Team Udayavani |

ಉಳಿತಾಯ ಮತ್ತು ಹೂಡಿಕೆ ಎಂಬ ಎರಡು ಪದಗಳನ್ನು ಭಾರತದಲ್ಲಿ ಅರ್ಥೈಸಿಕೊಳ್ಳುವಲ್ಲಿ ಆಚೀಚೆ ಆಗುತ್ತದೆ. ಇವೆರಡರ ಮಧ್ಯೆ ವ್ಯತ್ಯಾಸವಿದೆ ಎಂಬುದನ್ನು ಹೆಚ್ಚಿನವರು ಗಮನಿಸುವುದಿಲ್ಲ. ಉಳಿತಾಯದಲ್ಲಿ ಗಳಿಕೆ ತೀರಾ ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲ. ಆದರೆ ಹೂಡಿಕೆ ಎಂಬುದು ಸಂಪತ್ತು ವರ್ಧನೆಗಾಗಿ ನಡೆಸುವ ವ್ಯವಸ್ಥಿತವಾದ ವಿಧಾನವಾಗಿದೆ. ಸಾಂಪ್ರದಾಯಿಕವಾಗಿ ಭಾರತ ಉಳಿತಾಯ ಕೇಂದ್ರಿತ ದೇಶ. 2016ರಲ್ಲಿ ದೇಶದಲ್ಲಿ ಕುಟುಂಬದ ಉಳಿತಾಯದ ದರ ಕುಟುಂಬದ ಆದಾಯದ ಶೇ.26ರಷ್ಟಿತ್ತು. ಕುಟುಂಬದ ಉಳಿತಾಯ ಎಂದರೆ, ಅದನ್ನು ಮಹಿಳೆಯೇ ನಿರ್ವಹಿಸುತ್ತಾಳೆ. ಪ್ರಾಥಮಿಕ ಉಳಿತಾಯ ಖಾತೆ, ನಗದು ಉಳಿತಾಯ ಅಥವಾ ಆರ್‌ಡಿ ಖಾತೆಗಳ ರೂಪದಲ್ಲೇ ಇದು ಬಹುತೇಕ ಇರುತ್ತದೆ.

Advertisement

ಸೀಮಾ ಮಧ್ಯಮ ವರ್ಗದ ಗೃಹಿಣಿ. ಪ್ರತಿವಾರ ಮನೆಯ ಗಳಿಕೆಯ ತುಸು ಹಣವನ್ನು ಬ್ಯಾಗ್‌ನಲ್ಲಿ ಇಡುವ ಮೂಲಕ ಉಳಿತಾಯ ಮಾಡುವುದು ಆಕೆಯ ಹವ್ಯಾಸ. ಕೆಲವೊಮ್ಮೆ ಈ ಹಣದ ತುಸು ಭಾಗವನ್ನು ಚಿನ್ನದಲ್ಲಿ ಹೂಡಿಕೆ ಮಾಡುತ್ತಾಳೆ. ಪ್ರತಿ ತಿಂಗಳು ಚಿಟ್‌ ಫ‌ಂಡ್‌ ರೂಪದ ಉಳಿತಾಯ ಯೋಜನೆಯಲ್ಲಿ ಪಾಲ್ಗೊಳ್ಳಲು ಕಿಟ್ಟಿ ಪಾರ್ಟಿಗೂ ಹೋಗುತ್ತಾಳೆ. ಆಕೆಯ ಗಂಡ ಮ್ಯೂಚುವಲ್‌ ಫ‌ಂಡ್‌, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಾನೆ. ಇವರಿಬ್ಬರ ಈ ಪ್ರವೃತ್ತಿಯಿಂದಾಗಿ ಇಳಿವಯಸ್ಸಿನಲ್ಲಿ, ಗಂಡ ಬಳಿಯಲ್ಲಿಲ್ಲದೇ ಹೋದರೆ ಅಂತಹ ವೇಳೆ ವೈಯಕ್ತಿಕ ಉಳಿತಾಯ ಖಾಲಿಯಾಗಿ ಸೀಮಾಗೆ ಹಣಕಾಸಿನ ನಿರ್ವಹಣೆ ಕಷ್ಟವಾಗಲಿದೆ. 

25ರ ಹರೆಯದ ಅಕ್ಷತಾ ಇವರಿಗಿಂತ ಭಿನ್ನ. ಈಕೆ ಮೆಟ್ರೋಪಾಲಿಟನ್‌ ಮಹಿಳೆ. ಮಾರ್ಕೆಟಿಂಗ್‌ ಕೆಲಸದಲ್ಲಿದ್ದಾಳೆ. ಮ್ಯೂಚುವಲ್‌ ಫ‌ಂಡ್‌, ವಿಮೆ ಖರೀದಿ, ಇತ್ಯಾದಿ ಹೂಡಿಕೆಯ ಬಗ್ಗೆ ತುಸು ತಿಳಿದುಕೊಂಡಿದ್ದಾಳೆ. ಆದರೆ ಯಾರ ಮೂಲಕ ಹೂಡಿಕೆ ಮಾಡಬೇಕು ಎಂಬುದರ ಅರಿವು ಹೊಂದಿಲ್ಲ. ಅದಕ್ಕೆ ತಂದೆಯನ್ನು ಅವಲಂಬಿಸುತ್ತಾಳೆ. ತಾನು ತಿಳ್ಕೊಳ್ಳುವುದು ಯಾವಾಗ ಎಂದರೆ, ಮುಂದೆ ನೋಡೋಣ ಎಂದುಕೊಳ್ಳುತ್ತಾಳೆ.

ಸೀಮಾ ಹಾಗೂ ಆಕ್ಷತಾರ ಸ್ಥಿತಿಯೇ ಭಾರತದ ಬಹುತೇಕ ಮಹಿಳೆಯರದ್ದಾಗಿದೆ. ಉದ್ಯೋಗಸ್ಥ ಮಹಿಳೆಯರಲ್ಲೂ ಶೇ.23 ಮಂದಿ ಮಾತ್ರ ಹೂಡಿಕೆ ಕುರಿತು ಸ್ವಂತ ನಿರ್ಧಾರ ಕೈಗೊಳ್ಳುತ್ತಾರೆ. ಉಳಿದ ಶೇ.77 ಮಂದಿ ತಂದೆ ಅಥವಾ ಪತಿಯನ್ನು ಅವಲಂಬಿಸುತ್ತಾರೆ. ಮಹಿಳೆಯರಲ್ಲಿ ಹಣಕಾಸು ಸಾಕ್ಷರತೆಯ ಕೊರತೆಯಿರುವುದೇ ಇದಕ್ಕೆ ಕಾರಣ. ಮಹಿಳೆಯರ ಸಬಲೀಕರಣದ ಮೊದಲ ಹೆಜ್ಜೆಯಾಗಿ ಅವರನ್ನೂ ಹೂಡಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. 
ಹಾಗಾದರೆ ಮಹಿಳೆ ಹೂಡಿಕೆಯನ್ನು ಸಕ್ರಿಯವಾಗಿ ಆರಂಭಿಸುವುದು ಹೇಗೆ? 

1. ಹಣಕಾಸು ಶಿಕ್ಷಣ
ಹೂಡಿಕೆ ಜಗತ್ತಿನತ್ತ ತೆರೆದುಕೊಳ್ಳಲು ಸ್ವಯಂ ಶಿಕ್ಷಣವೇ ಮೊದಲ ಮೆಟ್ಟಿಲು. ಹೂಡಿಕೆ ವಿಧಾನಗಳು ಹಾಗೂ ಯೋಜನೆಗಳ ಕುರಿತು ಸಾಧ್ಯವಾದಷ್ಟು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಮಹಿಳೆ ಸ್ವತಃ ತಾವೇ ಪ್ರಯತ್ನಿಸಬೇಕು. ಆನ್‌ಲೈನ್‌ ಮತ್ತು ಆಫ್ಲೈನ್‌ಲ್ಲಿ ಉಚಿತವಾಗಿ ಸಾಕಷ್ಟು ಸಂಪತ್ತು ನಿರ್ವಹಣಾ ಆಪ್‌ಗ್ಳು, ಕಮ್ಯುನಿಟಿಗಳು, ವೈಯಕ್ತಿಕ ಹಣಕಾಸು ಕಾರ್ಯಾಗಾರಗಳು ಮತ್ತು ಕೋರ್ಸ್‌ಗಳು ಲಭ್ಯ ಇವೆ. 

Advertisement

2. ಸಣ್ಣ ಮತ್ತು ಯೋಜಿತ ಹೂಡಿಕೆ ಆರಂಭ
ವಿವಿಧ ಕಡಿಮೆ ಅಪಾಯದ ಆಯ್ಕೆಗಳಾದ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಪಿ) ಮತ್ತು ಆರ್‌ಡಿ ಮೊದಲಿಗೆ ಹೂಡಿಕೆ ಆರಂಭಿಸಲು ಸೂಕ್ತ. ವರ್ಷಕ್ಕೆ ಕನಿಷ್ಠ 500 ರೂ.ನಿಂದ ಕೂಡಾ ಹೂಡಿಕೆ ಆರಂಭಿಸಬಹುದು. ಪಿಪಿಎಫ್ ಗರಿಷ್ಠ 1.5 ಲಕ್ಷ ರೂ. ತನಕ ತೆರಿಗೆ ಅನುಕೂಲವನ್ನೂ ನೀಡುತ್ತದೆ. 1 ಲಕ್ಷದಷ್ಟು ದೊಡ್ಡ ಮೊತ್ತವನ್ನು ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು. ಶೇ.5- ಶೇ.8.25ರ ತನಕ ಇದರಲ್ಲಿ ಬಡ್ಡಿ ಪಡೆದುಕೊಳ್ಳಬಹುದು.
 
3. ವಿಮೆಯ ಖಾತ್ರಿ ಮಾಡಿ
ವಿಮೆಯನ್ನು ನಿರ್ಲಕ್ಷಿಸುವುದು ಮಹಿಳೆಯರು ಮಾಡುವ ಅತಿದೊಡ್ಡ ತಪ್ಪಾಗಿದೆ. ಹಣಕಾಸು ಭದ್ರತೆಗಾಗಿ ಆರೋಗ್ಯ ಹಾಗೂ ಜೀವ ವಿಮೆ ಮಾಡಿಸಿಕೊಳ್ಳುವುದು ಉತ್ತಮ. ಇದು ತೆರಿಗೆ ಅನುಕೂಲವನ್ನೂ ಒದಗಿಸುತ್ತದೆ.

4.  ನಿಮ್ಮ ಹೂಡಿಕೆ ವರ್ಧಿಸಿ
ಆರಂಭದ ಸಣ್ಣ ಹೂಡಿಕೆಯಿಂದ ಕ್ರಮೇಣವಾಗಿ ಮುಂದುವರಿಯಿರಿ. ಎಸ್‌ಐಪಿಗಳು, ಮ್ಯೂಚುವಲ್‌ ಫ‌ಂಡ್‌ಗಳು, ಈಕ್ವಿಟಿಗಳಂತಹ ವಿವಿಧ ಹೂಡಿಕೆಗಳ ಅವಕಾಶವನ್ನು ಕಂಡುಕೊಳ್ಳಿ. ಆದರೆ ಹೂಡುವ ಮುನ್ನ ಅದರ ಲಾಭ-ಅಪಾಯ ಅರಿತುಕೊಳ್ಳಿ. ಒಮ್ಮೆ ಅರ್ಥವಾದರೆ ಅದರ ನಿರ್ವಹಣೆ ಸುಲಭವಾಗುತ್ತದೆ. 

– ರಾಧ

Advertisement

Udayavani is now on Telegram. Click here to join our channel and stay updated with the latest news.

Next