ಮೆಲ್ಬರ್ನ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮತ್ತೆ ಕ್ರಿಕೆಟ್ ಆಟವನ್ನು ನೋಡಬಹುದು. 1998ರ ಬಳಿಕ ಇದೇ ಮೊದಲ ಬಾರಿಗೆ 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವನಿತಾ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಪ್ರಕಟಿಸಿದೆ.
ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಮ್ಮೆ ಕ್ರಿಕೆಟ್ ಆಟ ಆಡಲಾಗಿತ್ತು. ಕೌಲಾಲಂಪುರದಲ್ಲಿ ನಡೆದ 1998ರ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ನಡೆದಿದ್ದು ದಕ್ಷಿಣ ಆಫ್ರಿಕಾ ಚಿನ್ನದ ಪದಕ ಜಯಿಸಿತ್ತು.
2022ರ ಬರ್ಮಿಂಗ್‌ಹ್ಯಾಮ್ ಗೇಮ್ಸ್ ಜುಲೈ 27ರಿಂದ ಆ. 7ರ ವರೆಗ ನಡೆಯಲಿದೆ. ವನಿತಾ ಕ್ರಿಕೆಟ್ ಟಿ20 ಮಾದರಿಯಲ್ಲಿ ಜರಗಲಿದ್ದು ಎಂಟು ತಂಡಗಳು ಭಾಗವಹಿಸಲಿವೆ.
ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಕ್ರೀಡೆ ಮರಳುತ್ತಿರುವುದನ್ನು ನಾವು ಸಂತೋಷದಿಂದ ಸ್ವಾಗತಿಸುತ್ತೇವೆ. ಇದೊಂದು ಐತಿಹಾಸಿಕ ಕ್ಷಣ ಎಂದು ಸಿಜಿಎಫ್ ಅಧ್ಯಕ್ಷ ಡ್ಯಾಮ್ ಲೂಯಿಸ್ ಮಾರ್ಟಿನ್ ಹೇಳಿದ್ದಾರೆ.
ಇದೊಂದು ನಿಜವಾಗಿಯೂ ವನಿತಾ ಕ್ರಿಕೆಟ್ ಪಾಲಿಗೆ ಮತ್ತು ಜಾಗತಿಕ ಕ್ರಿಕೆಟ್ ಸಮುದಾಯಕ್ಕೆ ಐತಿಹಾಸಿಕ ಕ್ಷಣ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸಾಹ್ನೆ ತಿಳಿಸಿದರು.
ಎಲ್ಲ ಪಂದ್ಯಗಳು ಎಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ತಾಣದಲ್ಲಿ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡಿನ ಗೆಲುವು ಸಹಿತ ಹಲವು ಸ್ಮರಣೀಯ ಪಂದ್ಯಗಳು ಏರ್ಪಟ್ಟಿದ್ದವು.