ಕೆಜಿಎಫ್: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ಮಹಿಳೆಯರ ಸಬಲೀಕರಣದ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಮಹಿಳೆ ಸಾಮರ್ಥ್ಯವನ್ನು ಸಾರ್ವಜನಿಕರು ಮುಕ್ತವಾಗಿ ಪ್ರಶಂಸಿಸಿದಾಗ ಮತ್ತು ಗೌರವ ಕೊಟ್ಟಾಗ ಸಬಲೀಕರಣ ನಿಜವಾಗುತ್ತದೆ ಎಂದು ಶಾಸಕಿ ಎಂ.ರೂಪಕಲಾ ಅಭಿಪ್ರಾಯಪಟ್ಟರು. ನಗರದ ವಕೀಲರ ಸಂಘದಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕೊಡಿಸಿ: ಮಹಿಳೆ ಸಾಕ್ಷರತೆ ಹೊಂದಿರಲಿ, ಇಲ್ಲದೆ ಇರಲಿ, ಆಕೆಯ ಸಾಮರ್ಥ್ಯ ಗುರುತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯನ್ನು ಸಂಪೂರ್ಣ ಸಾಕ್ಷರಳನ್ನಾಗಿ ಮಾಡಬೇಕಾಗಿದೆ ಎಂದರು.
ಆದರ್ಶ: ದೇಶದಲ್ಲಿ ಮಹಿಳೆಯರು ಉನ್ನತ ಹುದ್ದೆ ಅಲಂಕರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಮದರ್ ತೆರೇಸಾ, ಇಂದಿರಾಗಾಂಧಿ, ಜಸ್ಟೀಸ್ ಆನಂದಿಗೋಪಾಲ್ ಜೋಶಿ, ಕಲ್ಪನಾ ಚಾವ್ಲಾ, ಡಾ.ಮುತ್ತುಲಕ್ಷಿರೆಡ್ಡಿ, ವಕೀಲೆ ಕಾರಿ°ಲಾ ಸೋರಬ್ಜಿ, ಸಾಲು ಮರದ ತಿಮ್ಮಕ್ಕ ಮೊದಲಾದ ಮಹಿಳೆಯರು ನಮ್ಮೊಡನೆ ಇದ್ದು ಮಹಿಳೆಯರಿಗೆ ಆದರ್ಶವಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ಸೇವೆಯಲ್ಲಿ ತೊಡಗಿದ್ದಾರೆಂದರು.
ಮಹಿಳೆಯರು ಸಬಲೀಕರಣವಾಗಬೇಕಾದರೆ ಮೊದಲು ಅದು ಮನೆಯಿಂದಲೇ ಶುರುವಾಗಬೇಕು. ಈ ನಿಟ್ಟಿನಲ್ಲಿ ಕುಟುಂಬದ ಸದಸ್ಯರು ಮಹಿಳೆಗೆ ಮುಕ್ತ ಆಯ್ಕೆ ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ವಕೀಲರ ಸಂಘದ ಕೋರಿಕೆ ಮೇರಗೆ ಅಭಿವೃದ್ಧಿಗಾಗಿ 2 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ದೌರ್ಜನ್ಯ ತಡೆಗಟ್ಟಿ: 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಜಗದೀಶ್ವರ, ಪುರುಷ ಪ್ರಧಾನ ಸಮಾಜ ಆಕೆಯನ್ನು ಮನೆಯಲ್ಲಿಯೇ ಬಂಧಿಯನ್ನಾಗಿಸಿದೆ. ಪುರುಷರಿಗೆ ಸಮನಾದ ಹಕ್ಕುಗಳಿವೆ ಎಂಬುದನ್ನು ಮರೆತಿದೆ. ಪೋಕೊ ಕಾಯಿದೆ ಇನ್ನು ಜಾರಿಯಲ್ಲಿದೆ ಎಂದರೆ, ಅದಕ್ಕೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವೇ ಕಾರಣ ಎಂದರು.
ಅನುದಾನ: ನಗರಸಭೆ ಆಯುಕ್ತ ಆರ್.ಶ್ರೀಕಾಂತ್ ಮಾತನಾಡಿ, ನಗರಸಭೆಯಿಂದ ಪರಿಶಿಷ್ಟಜಾತಿ ಮತ್ತು ವರ್ಗದ ವಕೀಲರಿಗೆ 5 ಲಕ್ಷ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 4.90 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು. ಅವರಿಗೆ ವೃತ್ತಿಗೆ ಬೇಕಾದ ಕಾನೂನು ಪುಸ್ತಕ ನೀಡಲಾಗುವುದು ಎಂದರು.
ಅಮೃತ ಯೋಜನೆ ಮತ್ತು ನಗರೋತ್ಥಾನ ಯೋಜನೆಗೆ ಶಾಸಕಿಯವರು ಚುರುಕಾಗಿ ಚಾಲನೆ ನೀಡಿದ್ದಾರೆ. ಮಹಿಳೆಯಾಗಿ ಅವರು ಮಾಡಿರುವ ಕೆಲಸ ಶ್ಲಾಘನೀಯ ಎಂದು ಹೇಳಿದರು. ನ್ಯಾಯಾಧೀಶರಾದ ದಯಾನಂದ ಹಿರೇಮಠ, ಲೋಕೇಶ್, ವಕೀಲರ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಜ್ಯೋತಿಬಸು, ಕಲೈಸೆಲ್ವಿ, ಶಾಂತಮ್ಮ, ಶ್ರೀನಿವಾಸ್, ಪ್ರೊಬೇಷನರಿ ನ್ಯಾಯಾಧೀಶರಾದ ಧನರಾಜ್ ಮತ್ತು ಕಿರಣ್ ಇದ್ದರು.
ನನಗೂ ನಿಂದಿಸಿದ್ದಾರೆ…: ಮಹಿಳೆಯರು ಮುಕ್ತವಾಗಿ ರಾಜಕೀಯಕ್ಕೆ ಬರಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಕೆಯನ್ನು ನಿಂದಿಸುವ, ಚಾರಿತ್ರ ವಧೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಎಲ್ಲಾ ಸನ್ನಿವೇಶಗಳು ತನಗೂ ಅನುಭವವಾಗಿದೆ. ಆದರೂ ಛಲ ಬಿಡದೆ ಸಾಮಾಜಿಕ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ರಾಜಕೀಯಕ್ಕೆ ಬರಬೇಕಾಯಿತು ಎಂದು ಶಾಸಕಿ ರೂಪಕಲಾ ಹೇಳಿದರು.