ಹರಿಹರ: ಮಹಿಳೆಯರು ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗದೇ ತಮಗೆ ಕೌಶಲ್ಯವಿದ್ದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದು ಮಾಜಿ ಸಚಿವೆ, ಎಂಎಲ್ಸಿ ಮೋಟಮ್ಮ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಜನ ಕಲ್ಯಾಣ ಟ್ರಸ್ಟ್ ನಗರದ ಲಕ್ಷ್ಮೀ ಮಹಲ್‌ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಂಪ್ಯೂಟರ್ ತರಬೇತಿ ಉದ್ಘಾಟನೆ, ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ, ಸಾಮೂಹಿಕ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ಮಹಿಳೆಯರು ಕುಟುಂಬ ನಿರ್ವ ಸುವುದು ಮಾತ್ರ ತಮ್ಮ ಕರ್ತವ್ಯ ಎಂದುಕೊಂಡು ಅದರಲ್ಲೇ ತಮ್ಮ ಬದುಕು ಮುಗಿಸುತ್ತಾರೆ. ಇದರ ಹೊರತಾಗಿ ತಮ್ಮ ಆಸಕ್ತಿಯ ಏನಾದರೊಂದು ಕ್ಷೇತ್ರದಲ್ಲಿ ಶ್ರಮವಹಿಸಿ ನೈಪುಣ್ಯತೆ ಹೊಂದಬೇಕು. ಸರಕಾರ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಇನ್ನೂ ಒಳ್ಳೆಯ ಬದುಕು ಕಟ್ಟಿಕೊಳ್ಳಲು. ಉತ್ತಮ ಸ್ಥಾನಮಾನ ಪಡೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಜನ್ಮ ನೀಡಿ ಹಾಲುಣಿಸಿ ಬೆಳೆಸಿದರೆ ಸಾಲದು, ಅವರಿಗೆ ಗುಣಮಟ್ಟದ ಉನ್ನತ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜೊತೆಗೆ ಅವರಲ್ಲಿ ಸ್ವಾವಲಂಬಿಗಳಾಗಿ ಬದುಕನ್ನು ಎದುರಿಸುವ ಸಾಮರ್ಥ್ಯ ಬೆಳೆಸಬೇಕು ಎಂದರು. ಮಹಿಳಾ ಬ್ಯಾಂಕ್, ಸಹಕಾರಿ ಸಂಘಗಳನ್ನು ಆರಂಭಿಸುವ ಮೂಲಕ ಸಮಾಜದ ಬಡವರಿಗೆ ಸ್ವಯಂ ಉದ್ಯೋಗ ಮಾಡಲು ಕಿರು ಸಾಲ ಸೌಲಭ್ಯಗಳನ್ನು ನೀಡಲು ಅವಕಾಶವಿದೆ. ಇಂತಹ ಹಣಕಾಸಿನ ಸಂಸ್ಥೆಗಳಿಂದ ಸಮಾಜಾಭಿವೃದ್ಧಿಯೂ ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಸಂಘ, ಅಂಬೇಡ್ಕರ್ ಮಹಿಳಾ ಅಭಿವೃದ್ಧಿ ನಿಗಮದ ಸಾಲ ಮನ್ನಾ ಮಾಡಿದೆ. ಅಂಗನವಾಡಿಗಳಲ್ಲಿ ಬಾಣಂತಿಯರಿಗೆ ಪೌಷ್ಟಿಕ ಆಹಾರ, ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಿದೆ ಎಂದರು.
ಮಾಜಿ ಸಚಿವರಾದ ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ್ ಅವರಂತಹ ಧೀಮಂತರು ಜನಸಿದ ಹರಿಹರ ತಾಲೂಕಿನಲ್ಲಿ ಛಲವಾದಿ ಸಮಾಜದವರು ಸಂಘಟಿತರಾಗಿ, ಸಮಾಜ ಅಭಿವೃದ್ದಿಪಡಿಸಬೇಕು ಎಂದರು. ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ ಮಾತನಾಡಿ, ಟ್ರಸ್ಟ್ ಹೊಲಿಗೆ ತರಬೇತಿ ನೀಡಿ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಜೊತೆಗೆ ರಾಜ್ಯಸರ್ಕಾರದ ಮಹಿಳೆಯರ ಪರ ಯೋಜನೆಗಳ ಕುರಿತು ಜಾಗೃ ಮೂಡಿಸಿ, ಸದ್ಬಳಕೆಯಾಗುವಂತೆ ಮಾಡಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಮಾತನಾಡಿದರು. ಹೊಲಿಗೆ ತರಬೇತಿ ಹೊಂದಿದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಲವರಿಗೆಸತ್ಕರಿಸಲಾಯಿತು. ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎಸ್.ರಾಮಯ್ಯ, ಕಾಂಗ್ರೆಸ್ ಮುಖಂಡ ಡಾ| ಮಹೇಶ್ವರಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಹೊನ್ನಮ್ಮ ಕೊಂಡಜ್ಜಿ, ಮಾಜಿ ಪೌರಾಯುಕ್ತ ಶೇಖರಪ್ಪ ಎಸ್., ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಆಬಿದ್ ಅಲಿ, ನಗರಸಭಾ ಸದಸ್ಯೆ ಮಂಜುಳಾ ಅಜ್ಜಯ್ಯ, ಡಾ| ಜಗನ್ನಾಥ್, ಲಲಿತಮ್ಮ, ಬಿ.ಎನ್. ಹಾಲೇಶ್, ಮಲ್ಲಿಕಾರ್ಜುನ್ ಛಲವಾದಿ, ಶಾಂತಮ್ಮ ಭೀಮೇಶ್, ಪರಶುರಾಮ ವೈ. ಅನ್ನಪೂರ್ಣ ಸಂಪತ್ ಕುಮಾರ್, ರೇಣುಕಾ ಎಲ್ ಮತ್ತಿತರರಿದ್ದರು.