Advertisement

ಮಹಿಳೆಯರಿಗೆ ನಿಷೇಧ ಹೇರಿಲ್ಲ; ಸಮಿತಿ

04:22 PM Jun 12, 2018 | Harsha Rao |

ಮಡಿಕೇರಿ: ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವಂತೆ “ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ’ ಎಂಬ ಕೆಲವು ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂಪ್ರೇರಿತವಾಗಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಹಾಗೂ ಜಿಲ್ಲಾಧಿಕಾರಿಗೆ ನೋಟಿಸ್‌  ಜಾರಿ ಮಾಡಿದೆ.
ಆಯೋಗದ ನೋಟಿಸ್‌ಗೆ ವ್ಯವಸ್ಥಾಪನ ಸಮಿತಿ ಉತ್ತರಿಸಿದ್ದು, ಈ ರೀತಿಯ ನಿಷೇಧವನ್ನು ಸಮಿತಿ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದೆ.

Advertisement

ಭಕ್ತರಲ್ಲಿ  ಗೊಂದಲ
ಭಾಗಮಂಡಲ ಹಾಗೂ ತಲಕಾವೇರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆ ಏರ್ಪಡಿಸಿತ್ತು. ಆ ವೇಳೆ ಹಲವು ದೋಷಗಳು ಕಂಡು ಬಂದಿವೆ ಎನ್ನಲಾಗಿದ್ದು, ಅವುಗಳನ್ನು ಸಮಿತಿ ಬಹಿರಂಗಪಡಿಸದ ಹಿನ್ನೆಲೆಯಲ್ಲಿ ವದಂತಿ ಹರಡಿ ಭಕ್ತರಲ್ಲಿ ಗೊಂದಲ ಮೂಡಿದೆ. ಗೊಂದಲ ನಿವಾರಿಸದಿರುವ ಸಮಿತಿಯ ಕ್ರಮದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.

ಕ್ಷೇತ್ರದಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸುವುದು ಸೂಕ್ತ ಎಂಬ ಅಭಿಪ್ರಾಯ ಅಷ್ಟಮಂಗಲ ಪ್ರಶ್ನೆ ಸಂದರ್ಭ ವ್ಯಕ್ತವಾಗಿತ್ತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಹಿಂದೆ ಮೂರು ದಿನಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ದೋಷಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜೂ. 18 ಮತ್ತು 19ರಂದು ಅಷ್ಟಮಂಗಲ ಪ್ರಶ್ನೆ ಮುಂದುವರಿಯಲಿದೆ.

ವಿವರಣೆ ಕೇಳಿದ ಡಿಸಿ
ಅಷ್ಟಮಂಗಲ ಪ್ರಶ್ನೆಯಲ್ಲಿ  ಏನು ನಡೆಯಿತು ಎನ್ನುವುದನ್ನು ವ್ಯವಸ್ಥಾಪನ ಸಮಿತಿ ಜಿಲ್ಲಾಡಳಿತದ ಗಮನಕ್ಕೆ ತಂದಿಲ್ಲ. ಈ ಹಿನ್ನೆಲೆಯಲ್ಲಿ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಸಮಿತಿಗೆ ನೊಟೀಸ್‌ ನೀಡಿದ್ದಾರೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.

Advertisement

ನಂಬಿಕೆಗೆ ಚ್ಯುತಿಯಾಗಲು ಬಿಡೆವು
ದೇಗುಲ ವ್ಯವಸ್ಥಾಪನ ಸಮಿತಿಯನ್ನು ಸರಕಾರ ನೇಮಿಸಿದ್ದು, ಮುಜರಾಯಿ ಇಲಾಖೆಯ ನಿಯಮದಂತೆ ಮಾತ್ರ ಕೆಲಸಗಳು ನಡೆಯುತ್ತವೆ. ಇದಕ್ಕೆ ವಿರುದ್ಧವಾಗಿ ಯಾವುದೇ ನಿರ್ಣಯ ತೆಗೆದುಕೊಂಡರೂ ಅದಕ್ಕೆ ಅವಕಾಶ ನೀಡುವುದಿಲ್ಲ.
– ಕೋಡಿ ಮೋಟಯ್ಯ, ಕ್ಷೇತ್ರದ ತಕ್ಕಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next