Advertisement

ನಗರಸಭೆ ಚುನಾವಣೆಯಲ್ಲಿ ಮಹಿಳೆಯರೇ ನಿರ್ಣಾಯಕರು

10:22 AM Aug 05, 2018 | |

ಪುತ್ತೂರು: ಪುತ್ತೂರು ನಗರಸಭೆ ಚುನಾವಣೆಯ ಜನಪ್ರತಿನಿಧಿಗಳ ಭವಿಷ್ಯ ನಿರ್ಧರಿಸುವಲ್ಲಿ ಮಹಿಳೆಯರೇ ನಿರ್ಣಾಯಕರಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ. ಕಾರಣ ಪುತ್ತೂರು ನಗರಸಭೆ ವ್ಯಾಪ್ತಿಯ ಒಟ್ಟು ಮತದಾರರ ಪೈಕಿ, ಮಹಿಳಾ ಮತದಾರರ ಸಂಖ್ಯೆಯೇ ಅಧಿಕ.

Advertisement

27 ವಾರ್ಡ್‌ಗಳ ಸಂಖ್ಯೆ 31ಕ್ಕೆ ಏರಿಕೆ ಆಗಿದೆ. ಪುರಸಭೆ ಆಗಿದ್ದ ಪುತ್ತೂರು ನಗರಸಭೆ ಆಗಿದೆ. ಇದಕ್ಕೆ ಪೂರಕವಾಗಿ ಮತದಾರರ ಸಂಖ್ಯೆಯೂ ಒಂದಷ್ಟು ಏರಿಕೆ ಕಂಡಿದೆ. ಇದರಲ್ಲಿ ಪುರುಷ ಹಾಗೂ ಮಹಿಳಾ ಮತದಾರರನ್ನು ತುಲನೆ ಮಾಡಿ ನೋಡುವಾಗ, ಮಹಿಳಾ ಮತದಾರರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಈ ಬಾರಿ ಪುರುಷರಿಗಿಂತ 512 ಮಂದಿ ಮಹಿಳಾ ಮತದಾರರು ಹೆಚ್ಚಿದ್ದಾರೆ.

2013ರಲ್ಲಿ ಪುರಸಭೆಯಾಗಿದ್ದ ಪುತ್ತೂರು ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆದಿತ್ತು. ಆಗ ಒಟ್ಟು ಮತದಾರರ ಸಂಖ್ಯೆ 34,382. ಇದರಲ್ಲಿ 17,249 ಪುರುಷ ಹಾಗೂ 17,133 ಮಹಿಳಾ ಮತದಾರರು. ಅಂದರೆ ಆಗ ಪುರುಷ ಮತದಾರರ ಸಂಖ್ಯೆಯೇ ಹೆಚ್ಚಿತ್ತು. ಅಂದರೆ ಪುರುಷರಿಗಿಂತ 116ರಷ್ಟು ಮಹಿಳೆಯರು ಕಡಿಮೆ ಇದ್ದರು. ಆದರೆ ಈಗ ಈ ಸಂಖ್ಯೆ ಬುಡಮೇಲಾಗಿದೆ.

2018ರ ಆಗಸ್ಟ್‌ 29ರಂದು ನಗರ ಸಭೆಗೆ ನಡೆಯುವ ಚುನಾವಣೆಯಲ್ಲಿ 31 ವಾರ್ಡ್‌ಗಳ 39,532 ಮತದಾರರು ಮತ ಚಲಾಯಿಸಲಿದ್ದಾರೆ. ಇದರಲ್ಲಿ 19,510 ಪುರುಷ, 20,022 ಮಹಿಳಾ ಮತದಾರರು. ಅಂದರೆ ಪುರುಷರಿಗಿಂತ 512 ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಒಟ್ಟು ಮತದಾರರ ಸಂಖ್ಯೆ ಗಮನಿಸುವಾಗ, 5,150ರಷ್ಟು ಮತದಾರರು ಹೆಚ್ಚಾಗಿದ್ದಾರೆ. ಇಲ್ಲಿ 2,261ರಷ್ಟು ಪುರುಷರು ಹಾಗೂ 2,889ರಷ್ಟು ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಮಹಿಳೆಯರ ಸಂಖ್ಯೆ ಇಲ್ಲಿ ಹೆಚ್ಚಾಗಿದೆ.

ವಾರ್ಡ್‌ನಲ್ಲೂ ಏರಿಕೆ
31 ವಾರ್ಡ್‌ಗಳ ಪೈಕಿ 10 ವಾರ್ಡ್‌ಗಳಲ್ಲಿ ಮಾತ್ರ ಪುರುಷ ಮತದಾರರ ಸಂಖ್ಯೆ ಹೆಚ್ಚಿದೆ. ಉಳಿದ 21 ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 1- ಕಬಕ 1, 2- ಕಬಕ 2, 6- ಬನ್ನೂರು, 8- ಚಿಕ್ಕಮುಟ್ನೂರು, 13- ಪುತ್ತೂರು ಕಸಬಾ- 4, 14- ಪುತ್ತೂರು ಕಸಬಾ 5, 16- ಪುತ್ತೂರು ಕಸಬಾ 7, 21- ಪುತ್ತೂರು ಕಸಬಾ 12, 28- ಕೆಮ್ಮಿಂಜೆ 5, 29 ಆರ್ಯಾಪು 1 ವಾರ್ಡ್‌ಗಳಲ್ಲಿ ಪುರುಷ ಮತದಾರರು ಹೆಚ್ಚಿದ್ದಾರೆ. ಉಳಿದ ಎಲ್ಲ ವಾರ್ಡ್‌ಗಳಲ್ಲೂ ಮಹಿಳೆಯರೇ ಪಾರಮ್ಯ. 

Advertisement

ವಾರ್ಡ್‌ವಾರು ವಿಭಾಗ
ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು 5 ಮಂದಿ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಪ್ರತಿಯೊಬ್ಬರಿಗೂ 6 ವಾರ್ಡ್‌ಗಳಂತೆ ವಿಭಾಗ ಮಾಡಿ ಹಂಚಲಾಗಿದೆ. 1ರಿಂದ 6 ವಾರ್ಡ್‌ಗಳಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಉದಯ್‌ ಶೆಟ್ಟಿ ಚುನಾವಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 7ರಿಂದ 12 ವಾರ್ಡ್‌ಗಳಿಗೆ ಕೃಷಿ ಇಲಾಖೆಯ ಉಪ ನಿರ್ದೇಶಕ ಶಿವಶಂಕರ ಎಚ್‌.ಡಿ., 13ರಿಂದ 18 ವಾರ್ಡ್‌ಗಳಿಗೆ ಸಹಕಾರ ಸಂಘ ಗಳ ಜಿಲ್ಲಾ ಉಪ ನಿಬಂಧಕ ಬಿ.ಕೆ. ಸಲೀಂ, 19ರಿಂದ 23 ಹಾಗೂ 31ನೇ ವಾರ್ಡ್‌ಗೆ ಪುತ್ತೂರು ತಾ.ಪಂ.ನ ಇಒ ಜಗದೀಶ್‌, 24ರಿಂದ 30ರ ವಾರ್ಡ್‌ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಯೀಂ ಹುಸೇನ್‌ ಅವರನ್ನು ನೇಮಕ ಮಾಡಲಾಗಿದೆ.

ಮೂವರು ಅನರ್ಹರು
2017ರ ಫೆಬ್ರವರಿ 12ರಂದು ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾವಣಾ ವೆಚ್ಚ ವಿವರ ಸಲ್ಲಿಸದ ಮೂವರು ಅಭ್ಯರ್ಥಿಗಳು ಈ ಬಾರಿ ಚುನಾವಣೆ ಎದುರಿಸುವಂತಿಲ್ಲ. ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಚುನಾವಣಾ ವೆಚ್ಚ ವಿವರ ಸಲ್ಲಿಸದೇ ಇರುವುದರಿಂದ, ಕರ್ನಾಟಕ ಮುನಿಸಿಪಾಲಿಟೀಸ್‌ ಅಧಿನಿಯಮ 1964ರ ಪ್ರಕರಣ 16ಸಿ ಅಡಿ ಅಭ್ಯರ್ಥಿಗಳನ್ನು ಅನರ್ಹ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. 3 ಅಭ್ಯರ್ಥಿಗಳ ಹೆಸರು ಹೀಗಿದೆ- ಶ್ಯಾಮಲ ನೆಲ್ಲಿಗುಂಡಿ ತೊಟ್ಟಿಲಕಯ, ವೀಣಾ ಚಿದಾನಂದ ಆಚಾರ್ಯ ಪಾಂಗಳಾಯಿ, ಆಶಾಲತಾ ನಾಯಕ್‌ ಬನ್ನೂರು.

ಗಣೇಶ್‌ ಎನ್‌.ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next