ಹೊಸದಿಲ್ಲಿ: ಸೇನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೇನಾ ಪೊಲೀಸ್ ಹುದ್ದೆಗೆ ಮಹಿಳೆಯರನ್ನು ನೇಮಿಸುವ ಐತಿಹಾಸಿಕ ನಿರ್ಧಾರವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮಿಲಿಟರಿ ಪೊಲೀಸ್ ವಿಭಾಗದಲ್ಲಿ ಹಂತ ಹಂತವಾಗಿ ಶೇ. 20ರಷ್ಟು ಮಹಿಳೆಯರನ್ನು ನೇಮಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳನ್ನು ತನಿಖೆ ನಡೆಸುವುದೂ ಸೇರಿ ಸೇನೆಗೆ ಅಗತ್ಯವಿರುವ ಕೆಲಸಗಳನ್ನು ಪೊಲೀಸ್ ಪಡೆ ನಡೆಸಲಿದೆ. ಕಳೆದ ವರ್ಷ ಸೇನಾ ಮುಖ್ಯಸ್ಥ ರಾವತ್, ಹೋರಾಟದ ಹುದ್ದೆಗಳಲ್ಲಿ ಮಹಿಳೆಯರನ್ನು ನೇಮಿಸುವ ನಿಟ್ಟಿನಲ್ಲಿ ನಾವು ಚಿಂತನೆ ನಡೆಸುತ್ತಿದ್ದೇವೆ. ಇದಕ್ಕೆ ಪೂರ್ವಭಾವಿಯಾಗಿ ಸೇನೆ ಪೊಲೀಸ್ ಪಡೆಯಲ್ಲಿ ಮಹಿಳೆಯರನ್ನು ನೇಮಿಸಲಾಗುತ್ತದೆ ಎಂದಿದ್ದರು. ಸದ್ಯ ಮೊದಲ ಹಂತದಲ್ಲಿ 800 ಮಹಿಳೆಯರನ್ನು ನೇಮಿಸಲು ನಿರ್ಧರಿಸಲಾಗಿದ್ದು, ಪ್ರತಿ ವರ್ಷ 52ರಂತೆ ಮಹಿಳೆಯರ ನೇಮಕ ಮಾಡಲಾಗುತ್ತದೆ. ಸದ್ಯ, ವೈದ್ಯಕೀಯ, ಕಾನೂನು, ಶೈಕ್ಷಣಿಕ, ಸಂಕೇತಗಳು ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಮಾತ್ರ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿದೆ.