Advertisement

ಕಲಬುರಗಿಯಲ್ಲಿ ಮಹಿಳಾ ಅಂಚೆ ಕಚೇರಿ ಕಾರ್ಯಾರಂಭ

11:06 AM Mar 10, 2020 | Suhan S |

ಕಲಬುರಗಿ: ಭಾರತೀಯ ಅಂಚೆ ಇಲಾಖೆಯ ಕಲಬುರಗಿ ವಿಭಾಗದ ಮೊದಲ ಮಹಿಳಾ ಅಂಚೆ ಕಚೇರಿ ಸೋಮವಾರದಿಂದ ಆರಂಭವಾಗಿದೆ.

Advertisement

ನಗರದ ಜಗತ್‌ ವೃತ್ತದಲ್ಲಿರುವ ಅಂಚೆ ಕಚೇರಿಯಲ್ಲಿ ಇನ್ಮುಂದೆ ಪೂರ್ಣ ಪ್ರಮಾಣದಲ್ಲಿ ಮಹಿಳೆಯರೇ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಎಲ್ಲ ಅಂಚೆ ಕಚೇರಿ ವಿಭಾಗದಲ್ಲಿ ತಲಾ ಒಂದು ಮಹಿಳಾ ಅಂಚೆ ಕಚೇರಿ ಆರಂಭಿಸುವಂತೆ ಮಾರ್ಗದರ್ಶನ ನೀಡಿತ್ತು. ಸರ್ಕಾರದ ಸಲಹೆಯಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳನ್ನೊಳಗೊಂಡಿರುವ ಕಲಬುರಗಿ ವಿಭಾಗದಲ್ಲಿ ಜಗತ್‌ ವೃತ್ತದ ಅಂಚೆ ಕಚೇರಿಯನ್ನು ಆಯ್ಕೆ ಮಾಡಿ ಮಹಿಳಾ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ.

ಈ ಅಂಚೆ ಕಚೇರಿಯಲ್ಲಿ ಮತ್ತು ಕೆಲಸ-ಕಾರ್ಯಗಳ ನಿರ್ವಹಣೆ ಹಾಗೂ ಗ್ರಾಹಕರಿಗೆ ಎಲ್ಲ ರೀತಿಯ ಸೇವೆಯನ್ನು ಮಹಿಳೆಯರು ಒದಗಿಸುತ್ತಾರೆ. ಒಬ್ಬರು ಅಂಚೆ ಪಾಲಕರು (ಪೋಸ್ಟ್‌ ಮಾಸ್ಟರ್‌), ಇಬ್ಬರು ಅಂಚೆ ಸಹಾಯಕರು ಹಾಗೂ ಒಬ್ಬರು ಪರಿಚಾಕರ ಹುದ್ದೆ ಇದ್ದು, ಎಲ್ಲ ಹುದ್ದೆಗಳಿಗೆ ಮಹಿಳೆಯರನ್ನೇ ನಿಯೋಜಿಸಲಾಗಿದೆ. ಸೋಮವಾರದಿಂದ ಮಹಿಳಾ ಸಿಬ್ಬಂದಿ ತಮ್ಮ ಕಾರ್ಯಭಾರ ಶುರು ಮಾಡಿದರು.

ಕಳೆಗಟ್ಟಿದ ಸಂಭ್ರಮ: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಮೊದಲ ಮಹಿಳಾ ಅಂಚೆ ಕಚೇರಿಯ ಹೆಗ್ಗಳಿಕೆಗೆ ಪಾತ್ರವಾದ ಕಾರಣ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಪರಿಪೂರ್ಣವಾಗಿ ಮಹಿಳಾ ಸಿಬ್ಬಂದಿ ಕಚೇರಿಯಲ್ಲಿ ಇದ್ದರಿಂದ ಕಚೇರಿ ಹೊಸ ಕಳೆಗಟ್ಟಿತ್ತು. ಪೋಸ್ಟ್‌ ಮಾಸ್ಟರ್‌ ನಾಗಮ್ಮ ಬಿ.ಸುರಪುರ, ಅಂಚೆ ಸಹಾಯಕರಾದ ಅಶ್ವಿ‌ನಿ ಮತ್ತು ಗುರುಬಾಯಿ ಹಾಗೂ ಪರಿಚಾರಕಿ ರಾಧಮ್ಮ ಸಗಡರದಿಂದಲೇ ಕಾರ್ಯ ನಿರ್ವಹಿಸಿದರು.

ಈ ಮಹಿಳಾ ಕಚೇರಿ ಕಟ್ಟಡದ ಮೇಲ್ಮಹಡಿಯಲ್ಲಿರುವ ಕಲಬುರಗಿ ವಿಭಾಗದ ಅಂಚೆ ಕಚೇರಿಗಳ ವರಿಷ್ಠ ಅಧೀಕ್ಷಕರ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಸಹಾಯಕ ಅಂಚೆ ಅಧೀಕ್ಷಕರಾದ ಸಿ.ಜಿ. ಕಾಂಬಳೆ ಮತ್ತು ವಿ.ಎಲ್‌. ಚಿತ್ತಕೋಟೆ ಮಹಿಳಾ ಸಿಬ್ಬಂದಿಗೆ ಹೂಗುತ್ಛ ನೀಡಿ ಶುಭ ಹಾರೈಸಿದರು.

Advertisement

ನಮ್ಮ ಮಹಿಳಾ ಅಂಚೆ ಕಚೇರಿ ಎಲ್ಲ ಕಚೇರಿಗಳಂತೆಯೇ ಕಾರ್ಯ ನಿರ್ವಹಿಸಲಿದೆ. ಆದರೆ, ಸಂಪೂರ್ಣವಾಗಿ ಮಹಿಳಾ ಸಹದ್ಯೋಗಿಗಳ ಮಧ್ಯೆ ಕೆಲಸ ಮಾಡುತ್ತೇವೆ ಎಂಬುವುದೇ ಖುಷಿ ವಿಷಯ. ಕಚೇರಿಯಲ್ಲಿ ಮಹಿಳೆಯರೇ ಇರುವುದರಿಂದ ಮಹಿಳಾ ಗ್ರಾಹಕರೊಂದಿಗೆ ಸಂವಹನ ನಡೆಸಲು ತುಂಬಾ ಅನುಕೂಲವಾಗಲಿದೆ. –ಅಶ್ವಿ‌ನಿಫಿ, ಅಂಚೆ ಸಹಾಯಕಿ

ಕಲಬುರಗಿ ವಿಭಾಗದ ವ್ಯಾಪ್ತಿಯ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 2 ಮುಖ್ಯ ಅಂಚೆ ಕಚೇರಿಗಳು, 72 ಇಲಾಖಾ ಕಚೇರಿಗಳು ಹಾಗೂ 553 ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿವೆ. ಇದು ಮೊದಲ ಮಹಿಳಾ ಅಂಚೆ ಕಚೇರಿ ಆಗಿದೆ. ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಕಚೇರಿಯಲ್ಲಿ ಎಲ್ಲ ರೀತಿಯ ಅಂಚೆ ಸೇವೆಗಳನ್ನು ಮಹಿಳಾ ಸಿಬ್ಬಂದಿ ಒದಗಿಸಲಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ತಾಳ್ಮೆ ಹಾಗೂ ಸಹನೆ ಇರುವುದರಿಂದ ವಿಶೇಷವಾಗಿ ಮಹಿಳಾ ಗ್ರಾಹಕರಿಗೂ ಉತ್ತಮ ಸೇವೆ ಸಿಗಲಿದೆ. – ವಿ.ಎಲ್‌. ಚಿತ್ತಕೋಟೆ, ಸಹಾಯಕ ಅಂಚೆ ಅಧೀಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next