Advertisement

ಮಹಿಳಾ ಪೊಲೀಸ್‌ ಠಾಣೆಗೆ ಸ್ವಂತ ಕಟ್ಟಡ ಭಾಗ್ಯ

11:15 PM Sep 01, 2019 | Sriram |

ನಗರ: ಕಡಬ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳನ್ನು ಒಳಗೊಂಡು ಪುತ್ತೂರು ವಿಭಾಗ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ದ.ಕ. ಜಿಲ್ಲೆಯ 2ನೇ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯ ಕಾರ್ಯ ಚಟುವಟಿಕೆಗೆ ಕಡೆಗೂ ಸ್ವಂತ ಕಟ್ಟಡ ಭಾಗ್ಯ ಲಭಿಸಿದೆ.

Advertisement

ಶ್ರೀ ಮಹಾಲಿಂಗೇಶ್ವರ ದೇವಾಲಯದ ಹಿಂಭಾಗದ ದ್ವಾರದ ಬಳಿ ಇರುವ ಹಳೆಯ ಠಾಣೆಯ ಕಟ್ಟಡದ ಪುನಶ್ಚೇತನ ಕಾಮಗಾರಿ ಪೂರ್ಣಗೊಂಡು ಸೆ. 1ರಂದು ಗೌರಿ ಹಬ್ಬದ ದಿನವೇ ಪೂಜಾ ವಿಧಿ ವಿಧಾನಗಳ ಮೂಲಕ ಮಹಿಳಾ ಪೊಲೀಸ್‌ ಠಾಣೆಗೆ ಗೃಹಪ್ರವೇಶ ನಡೆದಿದೆ.

ಮಹಿಳಾ ಠಾಣಾ ವ್ಯವಸ್ಥೆ ಪುತ್ತೂರಿಗೆ ಮಂಜೂರುಗೊಂಡು 2017ರ ಮಾ. 11ರಿಂದ ಕಾರ್ಯ ನಿರ್ವಹಣೆ ಆರಂಭ ಗೊಂಡಿತ್ತು. ಸ್ವಂತ ಕಟ್ಟಡದ ಕೊರತೆಯಿಂದ ಸಂಚಾರ ಠಾಣೆಯ ಹೊಸ ಕಟ್ಟಡದಲ್ಲೇ ಮಹಿಳಾ ಠಾಣಾ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿತ್ತು. ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಸ್ವಂತ ಕಟ್ಟಡಕ್ಕೆ ಮಹಿಳಾ ಠಾಣೆ ಸ್ಥಳಾಂತರಗೊಳ್ಳುವ ದಿನ ಸನ್ನಿಹಿತವಾಗಿದೆ.

ಐತಿಹಾಸಿಕ ಕಟ್ಟಡ
ಹಲವು ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣವಾಗಿದ್ದು, ಪುತ್ತೂರು ನಗರ ಪೊಲೀಸ್‌ ಠಾಣೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡ 2010ರಲ್ಲಿ ಪುತ್ತೂರಿಗೆ ಸಂಚಾರ ಪೊಲೀಸ್‌ ಠಾಣೆ ಮಂಜೂರಾದಾಗ ಈ ಕಟ್ಟಡವನ್ನು ಸಂಚಾರ ಠಾಣೆಯನ್ನಾಗಿ ಮಾಡಲಾಗಿತ್ತು. 2015ರ ಸೆ. 7ರಂದು ಪಕ್ಕದ ನೂತನ ಕಟ್ಟಡಕ್ಕೆ ಸಂಚಾರ ಪೊಲೀಸ್‌ ಠಾಣೆ ಸ್ಥಳಾಂತರಗೊಂಡಿತ್ತು. ಈ ಸಂದರ್ಭ ಹಳೆ ಪೊಲೀಸ್‌ ಠಾಣೆಯ ಕಟ್ಟಡವನ್ನು ಮಹಿಳಾ ಪೊಲೀಸ್‌ ಠಾಣೆಗೆ ಬಿಟ್ಟುಕೊಡಲಾಗಿತ್ತು. ಪುತ್ತೂರಿನ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಹೊಸದಾಗಿ ಆರಂಭಗೊಳ್ಳುವ ವ್ಯವಸ್ಥೆಗಳು ಇದೇ ಕಟ್ಟಡ ದಲ್ಲಿ ಆರಂಭಗೊಂಡಿರುವುದು ವಿಶೇಷ.

ಪುತ್ತೂರಿಗೆ ಮಹಿಳಾ ಪೊಲೀಸ್‌ ಠಾಣೆಯ ವ್ಯವಸ್ಥೆಯನ್ನು ಮಂಜೂರುಗೊಳಿಸಿದ ಸರಕಾರ ಗೃಹ ಇಲಾಖೆಯ ಮೂಲಕ 19.20 ಲಕ್ಷ ರೂ. ಅನುದಾನ ಮಂಜೂರುಗೊಳಿಸಿತ್ತು. ಹಳೆಯ ಪೊಲೀಸ್‌ ಸ್ಟೇಷನ್‌ ಕಟ್ಟಡವನ್ನು ಅಭಿವೃದ್ಧಿಪಡಿಸಿ ಅಲ್ಲಿಗೆ ಮಹಿಳಾ ಠಾಣೆಯನ್ನು ಸ್ಥಳಾಂತರಿಸುವ ಯೋಜನೆಗೆ ಸಂಬಂಧಿಸಿ ನಿರ್ಮಿತಿ ಕೇಂದ್ರದ ಮೂಲಕ ಪುನಶ್ಚೇತನ ಕಾಮಗಾರಿ ನಡೆಸಿದ್ದು, ಠಾಣೆಯ ಕಟ್ಟಡ ತೀರಾ ಹಳೆಯದಾಗಿದ್ದ ಹಿನ್ನೆಲೆಯಲ್ಲಿ ಅದರ ಮೂಲ ಸ್ಥಿತಿಗೆ ಯಾವುದೇ ತೊಡಕು ಉಂಟಾಗದಂತೆ ಅದನ್ನು ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಕಾಮಗಾರಿಗಳು ನಡೆಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳಲು ಬಹಳಷ್ಟು ಅವಧಿ ತೆಗೆದುಕೊಂಡಿತ್ತು.

Advertisement

 ಶೀಘ್ರ ಸ್ಥಳಾಂತರ
ಗೌರಿ ಹಬ್ಬದ ಹಿನ್ನೆಲೆಯಲ್ಲಿ ಸರಳವಾಗಿ ಮಹಿಳಾ ಠಾಣೆ ವ್ಯವಸ್ಥೆಯ ಪ್ರವೇಶ ಆಗಿದೆ. ಮುಂದೆ ಕೆಲವು ದಿನಗಳಲ್ಲಿ ಮಹಿಳಾ ಠಾಣೆಯ ಪೂರ್ಣ ಕಾರ್ಯಚಟುವಟಿಕೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
ಸೇಸಮ್ಮ
ಮಹಿಳಾ ಠಾಣಾ ಎಸ್‌ಐ

Advertisement

Udayavani is now on Telegram. Click here to join our channel and stay updated with the latest news.

Next