ರಾಜಸ್ಥಾನ್(ಪಾಲಿ):ಅತೀ ವೇಗವಾಗಿ ಚಲಿಸುತ್ತಿದ್ದ ಬಸ್ ವೊಂದು 80 ಅಡಿ ಉದ್ದದ ಕಬ್ಬಿಣದ ಪೈಪ್ ಗೆ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆ ಹಾಗೂ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಮಂಗಳವಾರ (ಡಿಸೆಂಬರ್ 1, 2020) ಸಂಜೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕಬ್ಬಿಣದ ಪೈಪ್ ಮಹಿಳೆಯ ಕುತ್ತಿಗೆಯನ್ನು ಸೀಳಿ ಹೊರಬಂದಿತ್ತು. ಯುವಕನ ತಲೆ ಸೀಳಿ ಹೋಗಿದ್ದು, ಇತರ 13 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೂವರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದೆ.
ಪಾಲಿ ಜಿಲ್ಲೆಯ ಸಾಂಡೇರವೊ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದು ಗ್ಯಾಸ್ ಪೈಪ್ ಲೈನ್ ಅಳವಡಿಸುತ್ತಿತ್ತು. ಕಬ್ಬಿಣದ ಪೈಪ್ ಅನ್ನು ಹೈಡ್ರಾಲಿಕ್ ಯಂತ್ರದ ಮೂಲಕ ವೆಲ್ಡ್ ಮಾಡಲು ನೇತು ಹಾಕಲಾಗಿತ್ತು. ಆದರೆ ಬಸ್ ಚಾಲಕ ಪೈಪ್ ಗಮನಿಸದೇ ವೇಗವಾಗಿ ಆಗಮಿಸಿದ ಪರಿಣಾಮ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಪಾಲಿ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಂಪನಿಯ ಬೇಜವಾಬ್ದಾರಿಯಿಂದ ಈ ಘಟನೆ ನಡೆಯಲು ಕಾರಣವಾಗಿದೆ. 80 ಅಡಿ ಉದ್ದದ ಪೈಪ್ ಅನ್ನು ಸುಲಭವಾಗಿ ಹೈಡ್ರಾಲಿಕ್ ಯಂತ್ರದ ಮೂಲಕ ಎತ್ತಲೂ ಸಾಧ್ಯವಿಲ್ಲ. ಕಂಪನಿ ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಯಂತ್ರಗಳ ಬಳಕೆಯಲ್ಲಿ ಸುರಕ್ಷತಾ ಕ್ರಮ ಅನುಸರಿಸಿಲ್ಲ ಎಂದು ಆರೋಪಿಸಿ ಆರು ದಿನಗಳ ಹಿಂದೆ ಪೊಲೀಸರು ಈ ಕಂಪನಿಗೆ ಸೇರಿದ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡಿದ್ದರು.