ಜೈಪುರ :100 ವರ್ಷದ ವೃದ್ಧೆಯೊಬ್ಬರು ಧರಿಸಿದ್ದ ಕಾಲುಂಗುರ ಕದಿಯುವ ಬಂದ ದರೋಡೆಕೋರರು ಕಾಲುಂಗುರಕ್ಕಾಗಿ ವೃದ್ಧೆಯ ಪಾದವನ್ನೇ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ದರೋಡೆಗೆ ಬಂದ ತಂಡವೊಂದು ರವಿವಾರ ನಸುಕಿನ ವೇಳೆ ಜೈಪುರದಲ್ಲಿರುವ ವೃದ್ಧೆಯ ಮನೆಗೆ ಹೊಕ್ಕು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಜಾಲಾಡಿ ಬಳಿಕ ವೃದ್ಧೆಯ ಕಾಲ ಬೆರಳಿನಲ್ಲಿದ್ದ ಕಾಲುಂಗುರವನ್ನು ತೆಗೆಯಲು ಹರಿತವಾದ ಆಯುಧದಿಂದ ವೃದ್ಧೆಯ ಪಾದವನ್ನೇ ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ, ರಕ್ತದ ಮಡುವುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಪುರದ ಜಮುನಾ ದೇವಿ ಎಂಬವರೇ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಜಾನೆ ೫ ಗಂಟೆಯ ವೇಳೆ ದಾಳಿ ನಡೆದಿದ್ದು, ಕುಟುಂಬಸ್ಥರೆಲ್ಲರೂ ಗಾಢ ನಿದ್ರೆಯಲ್ಲಿದ್ದ ವೇಳೆ ದಾಳಿ ನಡೆದಿರುವುದು ಯಾರಿಗೂ ತಿಳಿದಿರಲಿಲ್ಲ. ವೃದ್ಧೆಯ ಮನೆಯವರು ಗುರುತು ಹಿಡಿಯುವ ಮುನ್ನವೇ ಕಳ್ಳರು ಕಾಲುಂಗುರ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಗಲ್ಟಾ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಅಧಿಕಾರಿ ಮಖೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಫೋರೆನ್ಸಿಕ್ ತಜ್ಞರ ಸಹಾಯದಿಂದ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಶಂಕಿತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ಮಹಿಳೆಯ ಕಾಲು ಕತ್ತರಿಸಲು ಬಳಸಿದ್ದ ಆಯುಧ ಸ್ಥಳದಲ್ಲೇ ಪತ್ತೆಯಾಗಿದೆ.
ಇದನ್ನೂ ಓದಿ : ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಸೇನಾ ಕಾರ್ಯಾಚರಣೆ : ಓರ್ವ ಉಗ್ರನ ಎನ್ಕೌಂಟರ್