Advertisement

Court ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಸಾವು ಪ್ರಕರಣ: ಪತಿ ಸಹಿತ ನಾಲ್ವರಿಗೆ 7 ವರ್ಷ ಜೈಲು

11:30 PM Jul 18, 2024 | Team Udayavani |

ಮಂಗಳೂರು: ವರದಕ್ಷಿಣೆ ಸಾವು ಪ್ರಕರಣ ವೊಂದರಲ್ಲಿ ಮೃತ ಮಹಿಳೆಯ ಗಂಡ, ಆತನ ಮೊದಲನೇ ಪತ್ನಿ, ಅತ್ತೆ ಮತ್ತು ಮೊದಲನೇ ಪತ್ನಿಯ ಅಣ್ಣನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 6 ವರ್ಷ ಕಠಿನ ಸಜೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

Advertisement

ಭದ್ರಾವತಿ ತಾ| ತಿಪ್ಲಾಪುರ ಗ್ರಾಮದ ಮಜೀದ್‌ ಅಹಮ್ಮದ್‌ (35), ಆತನ ಮೊದಲನೇ ಪತ್ನಿ ಸಪೂರ ಅಂಜುಮ್‌ (28), ತಾಯಿ ಮಮ್ತಾಜ್‌ ಬಾನು (60) ಮತ್ತು ಸಪೂರ ಅಂಜುಮ್‌ಳ ಅಣ್ಣ ಭದ್ರಾವತಿ ಹಳೆನಗರದ ಕಾಜಿ ಮೊಹಲ್ಲ 4ನೇ ಕ್ರಾಸ್‌ ನಿವಾಸಿ ಜಮೀರ್‌ ಅಹಮ್ಮದ್‌ (30) ಶಿಕ್ಷೆಗೊಳಗಾದವರು.

ಪ್ರಕರಣದ ವಿವರ
ಮಜೀದ್‌ ಅಹಮ್ಮದ್‌ಗೆ ಮೊದಲೇ ಒಂದು ಮದುವೆಯಾಗಿದ್ದು, ಪತ್ನಿ ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ಸುಳ್ಳು ಹೇಳಿ ಚೆನ್ನಗಿರಿಯ ರೇಷ್ಮಾ ಬಾನು (26) ಎಂಬಾಕೆಯನ್ನು 2018ರ ಅ. 8ರಂದು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಮದುವೆಯಾಗಿದ್ದ. ಆಕೆಗೂ ಇದು 2ನೇ ಮದುವೆಯಾಗಿತ್ತು. ಮದುವೆ ವೇಳೆ ರೇಷ್ಮಾ ಬಾನುವಿನ ತಂದೆ ಮೊಹಮ್ಮದ್‌ ನಜೀರ್‌ ಅವರು ವರದಕ್ಷಿಣೆಯಾಗಿ ಚಿನ್ನಾಭರಣ, ಪೀಠೊಪಕರಣಗಳನ್ನು ನೀಡಿದ್ದರು.

ಮದುವೆಯಾದ ಬಳಿಕ ಆತ ರೇಷ್ಮಾ ಬಾನು ಜತೆ ಕಾಟಿಪಳ್ಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆತನಿಗೆ ಸುರತ್ಕಲ್‌ನಲ್ಲಿ ಗ್ಯಾರೇಜ್‌ ತೆರೆಯಲು ಮೊಹಮ್ಮದ್‌ ನಜೀರ್‌ 1 ಲಕ್ಷ ರೂ. ನೀಡಿದ್ದರು. ಕೆಲವು ಸಮಯದ ಬಳಿಕ ಕಾಟಿಪಳ್ಳದ ಮನೆಗೆ ಆತನ ತಾಯಿ, ಮೊದಲನೇ ಪತ್ನಿ, ಆಕೆಯ ಅಣ್ಣ ಎಲ್ಲರೂ ಬಂದು ವಾಸವಾಗಿದ್ದರು. ಬಳಿಕ ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು.

2019ರ ಎ. 28ರಂದು ರೇಷ್ಮಾ ಬಾನು ಮಲಗಿದ್ದಾಗ ಮಜೀದ್‌ ತಲೆದಿಂಬಿನಿಂದ ಉಸಿರು ಕಟ್ಟಿಸಿ ಕೊಲೆಗೆ ಯತ್ನಿಸಿದ್ದು, ಅಸ್ವಸ್ಥಳಾದ ಆಕೆಯನ್ನು ಫ್ಯಾನ್‌ಗೆ ನೇಣು ಹಾಕಿದ್ದರು. ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜ್‌ ಎಸ್‌.ವಿ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ.

ಐಪಿಸಿ ಕಲಂ 302 ಕೊಲೆ ಪ್ರಕರಣದಲ್ಲಿ ಸೂಕ್ತ ಸಾಕ್ಷಿ ಇಲ್ಲದ ಕಾರಣ ಖುಲಾಸೆಗೊಳಿಸಲಾಗಿದೆ. 304 (ಬಿ)ಯಲ್ಲಿ ವರದಕ್ಷಿಣೆ ಸಾವು ಪ್ರಕರಣದಲ್ಲಿ ನಾಲ್ಕೂ ಮಂದಿಗೆ 7 ವರ್ಷ ಕಠಿನ ಶಿಕ್ಷೆ, 498 (ಎ)ಯಡಿ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ ದಂಡ. ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3ರಲ್ಲಿ 5 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ಕಲಂ 4ರಲ್ಲಿ 6 ತಿಂಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಮಜೀದ್‌ ಅಹಮ್ಮದ್‌ ಈಗಾಗಲೇ 5 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ಆತನಿಗೆ 2 ವರ್ಷ ಜೈಲು ಶಿಕ್ಷೆ ಬಾಕಿ ಇದೆ. ಉಳಿದವರು 7 ವರ್ಷ ಕಠಿನ ಶಿಕ್ಷೆ ಅನುಭವಿಸಬೇಕು.

ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪಿ. ನಾಯಕ್‌, ಬಿ. ಶೇಖರ್‌ ಶೆಟ್ಟಿ ಮತ್ತು ಚೌಧರಿ ಮೋತಿಲಾಲ್‌ ಅವರು ಸಾಕ್ಷಿ ವಿಚಾರಣೆ ನಡೆಸಿದ್ದು, ಚೌಧರಿ ಮೋತಿಲಾಲ್‌ ಅವರು ವಾದ ಮಂಡನೆ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next