ಮಂಗಳೂರು: ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯೋರ್ವರ ಚಿನ್ನಾಭರಣ ಸಹಿತವಾದ ಹ್ಯಾಂಡ್‌ಬ್ಯಾಗನ್ನು ಕಳವು ಮಾಡಿದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.ಮೂಲತಃ ಮೂಡುಶೆಡ್ಡೆ ನಿವಾಸಿ ಮಂಗಳಾದೇವಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಕೇಶ್ ಬಂಧಿತ ಆರೋಪಿ.
ಪ್ರಕರಣದ ವಿವರ
ನ.14ರಂದು ಕಾವೂರು ವ್ಯವಸಾಯ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯೋರ್ವರು ಚಿನ್ನಾಭರಣ ಮತ್ತು ಮೊಬೈಲ್ ಇದ್ದ ಹ್ಯಾಂಡ್ ಬ್ಯಾಗನ್ನು ಸಭಾಂಗಣದಲ್ಲಿರುವ ಕುರ್ಚಿಯಲ್ಲಿ ಇಟ್ಟಿದ್ದರು. ಆರೋಪಿ ಕಾರ್ಯಕ್ರಮ ವೀಕ್ಷಿಸುವ ನೆಪದಲ್ಲಿ ಬಂದು ಹ್ಯಾಂಡ್ ಬ್ಯಾಗ್ ಕಳವು ಮಾಡಿದ್ದ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ, ಮೊಬೈಲ್ ಸೇರಿದಂತೆ ಒಟ್ಟು 65,000 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.