Advertisement

ಮಹಿಳೆ ಸಾಧನೆ ಹೆಮ್ಮೆಯ ಸಂಗತಿ

10:42 AM Apr 09, 2019 | pallavi |
ಹುಬ್ಬಳ್ಳಿ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉತ್ಕೃಷ್ಟ ಸ್ಥಾನವಿದೆ. ಸಂಸ್ಕೃತಿ, ಪರಂಪರೆ ಮತ್ತು ಆದರ್ಶಗಳನ್ನು ಬೆಳೆಸಿಕೊಂಡು ಬರುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆಧುನಿಕ ಯುಗದಲ್ಲಿ ಮಹಿಳೆ ಎಲ್ಲಾ ರಂಗಗಳಲ್ಲಿ ಗುರುತಿಸಿಕೊಂಡು ಉನ್ನತಿ ಹೊಂದುತ್ತಿರುವುದು ಸಂತೋಷದ ಸಂಗತಿ. ಮಹಿಳೆಯರು ತಮ್ಮ ಸಾಧನೆ ಮತ್ತು ಪ್ರಯತ್ನದಿಂದ ಪುರುಷರಿಗಿಂತಲೂ ಬಲಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ತಮ್ಮ ವೃತ್ತಿ ಬೆಳವಣಿಗೆ ಜೊತೆಗೆ ಕುಟುಂಬದ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಆಚರಣೆಯಲ್ಲಿ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದನ್ನು ಮರೆಯಲಾಗದು. ಧರ್ಮದ ಉತ್ಕೃಷ್ಟ ಸಂಸ್ಕೃತಿ ಸಂಪ್ರದಾಯ, ಪರಂಪರೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸಿಕೊಂಡು ಬರುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಹೇಳಿದರು.
ಸುಳ್ಳದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಸೂಡಿಯ ಡಾ| ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷೆ ಇಂದುಮತಿ ಮಾನ್ವಿ
, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಮತ್ತು ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಮಾತನಾಡಿದರು.
ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯ ಕೇಂದ್ರ ಸಮಿತಿಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ಬಸವರಾಜ ಸುಳ್ಳದ ಮತ್ತು ಸುವರ್ಣಮ್ಮ ಪುರಾಣಿಕ ಅವರನ್ನು ನೇಮಕ ಮಾಡಲಾಯಿತು. ಶ್ರುತಿ ಭೂಸನೂರಮಠ ಸ್ವಾಗತಿಸಿದರು. ಜಯಶ್ರೀ ವಾಲಿ ವಾರ್ಷಿಕ ವರದಿ ಮಂಡಿಸಿದರು. ಶೈಲಜಾ ಹಿರೇಮಠ ಮತ್ತು ಲಲಿತಾ ಹಿರೇಮಠ ನಿರೂಪಿಸಿದರು.
ಜಂಗಮರಿಗೆ ಧಾರ್ಮಿಕ ಕೈಂಕರ್ಯ ಶಿಬಿರ 
ಧಾರವಾಡ: ವೀರಶೈವ ಜಂಗಮ ವಿದ್ಯಾರ್ಥಿಗಳಿಗಾಗಿ ಧಾರ್ಮಿಕ ಕೈಂಕರ್ಯಗಳ ನಿರ್ವಹಣೆಗೆ ಪೂರಕವಾಗಿ ಏ. 15ರಿಂದ ಮೇ 15ರ ವರೆಗೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಬೇಸಿಗೆ ಶಿಬಿರ ಜರುಗಲಿದೆ. ಉಗರಗೋಳದ ವೀರಶೈವ ಸಂಸ್ಕೃತ ವೇದಪಾಠ ಶಾಲೆ ಆಶ್ರಯದಲ್ಲಿ ನಡೆಯುವ ಈ ಶಿಬಿರದಲ್ಲಿ ವೀರಶೈವ ಧರ್ಮದ ತತ್ವಾಚರಣೆಗಳು, ಲಘು ಪಂಚಾಂಗ ತಿಳಿವಳಿಕೆ ಸೇರಿದಂತೆ ಅನೇಕ ಉಪಯುಕ್ತ ವಿಚಾರಗಳನ್ನು ಬೋಧಿಸಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳುವ ಜಂಗಮ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಆಸಕ್ತ ಪಾಲಕರು ಹಾಗೂ ಪೋಷಕರು ವೀರಯ್ಯ ಪದಕಿಮಠ (ಮೊ : 9845480675) ಹಾಗೂ ವಿಜಯಕುಮಾರ ಹಿರೇಮಠ (ಮೊ: 9480852198) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next