Advertisement

ವಿಮಾ ಕಂಪನಿ ವಿರುದ್ಧ ಹೋರಾಡಿ ಗೆದ್ದ ಮಹಿಳೆ

11:16 AM Nov 11, 2017 | Team Udayavani |

ಬೆಂಗಳೂರು: ಆ ಮಹಿಳೆ, ತನ್ನ ಮಗನ ವಿದ್ಯಾಭ್ಯಾಸದ ವೆಚ್ಚಕ್ಕಿರಲಿ ಎಂದು ವಿಮೆಯೊಂದನ್ನು ಮಾಡಿಸಿ, ಹತ್ತು ವರ್ಷಗಳ ಕಾಲ ಚಾಚೂತಪ್ಪದೆ ಕಂತುಗಳನ್ನು ಪಾವತಿಸುತ್ತಾ ಬಂದಿದ್ದರು. ವಿಮೆ ಅವಧಿ ಮುಗಿಯುತ್ತಿದ್ದಂತೆ ಹೆಚ್ಚುವರಿಯಾಗಿ 1.03 ಲಕ್ಷ ರೂ. ನೀಡುವುದಾಗಿ ಆ ಕಂಪನಿ ಹೇಳಿತ್ತು. ಆದರೆ ಒಪ್ಪಂದದ ಅವಧಿ ಮುಗಿದಾಗ ರಾಗ ಬದಲಿಸಿದ ಸಂಸ್ಥೆ, ಪೂರ್ಣ ಹಣ ನೀಡಲಾಗದು ಎಂದಿತ್ತು.

Advertisement

ಇದರಿಂದ ಕಂಪನಿ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋದ ಮಹಿಳೆ, ಸತತ ಮೂರು ವರ್ಷ ಹೋರಾಟ ನಡೆಸಿ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ವಿಮೆ ಕಂಪನಿ ವಿರುದ್ಧ ಕಲ್ಯಾಣನಗರದ ಮಹಿಳೆ ನೀಡಿದ್ದ ದೂರು ಪುರಸ್ಕರಿಸಿರುವ ನಗರದ ಎರಡನೇ ಗ್ರಾಹಕರ ನ್ಯಾಯಾಲಯ,

ಒಪ್ಪಂದದಂತೆ ನಡೆಯದ ವಿಮೆ ಕಂಪನಿಗೆ ಬಿಸಿ ಮುಟ್ಟಿಸುವ ಜತೆಗೆ  ನ್ಯಾಯಬದ್ಧವಾಗಿ ಮಹಿಳೆಗೆ ಕೊಡಬೇಕಾಗಿರುವ 1.03 ಲಕ್ಷ ರೂ.ಗಳಿಗೆ ನಾಲ್ಕು ವರ್ಷಗಳಿಗೆ ಅನ್ವಯವಾಗುವಂತೆ ವಾರ್ಷಿಕ ಶೇ.12ರಷ್ಟು ಬಡ್ಡಿ ಸಹಿತ ವಾಪಾಸ್‌ ನೀಡುವಂತೆ ಆದೇಶಿಸಿದೆ. ಮಹಿಳೆ ಬಳಿ ಸೂಕ್ತ ದಾಖಲೆಗಳಿದ್ದರೂ ಪೂರ್ಣ ಹಣ ಪಾವತಿಸದ ಕ್ರಮ ಸರಿಯಲ್ಲ.

ಮಹಿಳೆ ತನ್ನ ಹಣ ಪಡೆಯಲು ಕಾನೂನು ಹೋರಾಟಕ್ಕಿಳಿದು ಮಾನಸಿಕ ಕಿರಿಕಿರಿ ಅನುಭವಿಸಿದ್ದಾರೆ. ಹೀಗಾಗಿ ಸಂಸ್ಥೆಯು ಮಹಿಳೆಗೆ 30 ದಿನಗಳಲ್ಲಿ 10 ಸಾವಿರ ರೂ. ಪರಿಹಾರ ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ. ವಿಚಾರಣೆ ವೇಳೆ ಪ್ರತಿವಾದಿ ವಿಮೆ ಕಂಪನಿ, ದೂರುದಾರ ಮಹಿಳೆ ಕಟ್ಟಿದ್ದ ಹಣಕ್ಕೆ ಪ್ರತಿಯಾಗಿ, ಬಡ್ಡಿ ಸಹಿತ ಬೋನಸ್‌ ಕೂಡ ನೀಡಲಾಗಿದೆ. ಇದೀಗ ದೂರುದಾರರು ಹೆಚ್ಚು ಹಣ ಕೇಳುತ್ತಿದ್ದಾರೆ.

ಈ ಪಾಲಿಸಿಯಲ್ಲಿ ಅಷ್ಟು ಹಣ ನೀಡಲು ಬರುವುದಿಲ್ಲ ಎಂದು ಸಂಸ್ಥೆಯ ವಾದ ಮಂಡಿಸಿತು. ಆದರೆ ಮಹಿಳೆ ಹಾಗೂ ಸಂಸ್ಥೆ ನಡುವಿನ ಒಪ್ಪಂದದ ದಾಖಲೆ ಪರಿಶೀಲಿಸಿದಾಗ ಕಂಪನಿ ಮಾತು ತಪ್ಪಿರುವುದನ್ನು ಕಂಡುಕೊಂಡ ನ್ಯಾಯಾಲಯ ಸಂಪೂರ್ಣ ಹಣ ಪಾವತಿಸಲು ತಾಕೀತು ಮಾಡಿತು.

Advertisement

ಏನಿದು ಪ್ರಕರಣ?: ಕಲ್ಯಾಣನಗರ ನಿವಾಸಿ ಪರ್ವೀನ್‌ ಎಂಬುವವರು ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಪುತ್ರನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು 2003ರ ಜನವರಿ 17ರಂದು ಐಸಿಐಸಿಐ ಸ್ಮಾರ್ಟ್‌ ಕಿಡ್‌ ಪಾಲಿಸಿ ಖರೀದಿಸಿದ್ದರು. 10 ವರ್ಷಗಳ ಅವಧಿಗೆ ಪ್ರತಿ ತಿಂಗಳಿಗೆ 1,111 ರೂ. ಪಾವತಿಸಿದರೆ ಅವಧಿ ಮುಗಿದ ಬಳಿಕ ಕಟ್ಟಿದ ಹಣಕ್ಕೆ ಬಡ್ಡಿ ಸೇರಿಸಿ ನೀಡಲಾಗುವುದು.

ಇದರೊಂದಿಗೆ ಹೆಚ್ಚುವರಿ ವಿಮೆ ಮೊತ್ತವಾಗಿ 1 ಲಕ್ಷ ರೂ. ನೀಡುವುದಾಗಿ ಕಂಪನಿ ಭರವಸೆ ನೀಡಿದ್ದ ಕಂಪನಿ, ಈ  ಸಂಬಂಧ ಒಪ್ಪಂದದ ದಾಖಲೆಗಳನ್ನು ಪರ್ವೀನಾ ಅವರಿಗೆ ನೀಡಿತ್ತು. ಪರ್ವೀನಾ ಅದರಂತೆ ಪ್ರತಿ ತಿಂಗಳು ವಿಮಾ ಕಂತು ಪಾವತಿಸಿದ್ದಾರೆ. ಹತ್ತು ವರ್ಷಗಳ ಅವಧಿಯಲ್ಲಿ ವಿಮಾ ಕಂಪನಿ ಹಲವು ಕಂತುಗಳ ರೂಪದಲ್ಲಿ ಒಟ್ಟು 1,34,138 ರೂ.ಗಳನ್ನು ಪಾವತಿಸಿತ್ತು.

ಆದರೆ, 2013ರ ಜನವರಿ 17ಕ್ಕೆ ವಿಮಾ ಒಪ್ಪಂದದ ಅವಧಿ ಮುಗಿದಿದೆ. ಹೀಗಾಗಿ ಪಾಲಿಸಿ ಆರಂಭಿಸುವಾಗ ಕಂಪನಿ ಮಾಡಿಕೊಂಡಿದ್ದ ಒಪ್ಪಂದದಂತೆ ಬರಬೇಕಿದ್ದ ಬಾಕಿ ಹಣಕ್ಕಾಗಿ ಹಲವು ಬಾರಿ ಕಂಪನಿಯ ಕಚೇರಿಗೆ ಭೇಟಿ ನೀಡಿದ್ದರು. ಆದರೆ “ನಿಮಗೆ ಕೊಡಬೇಕಿರುವ ಹಣ ಕೊಟ್ಟಿದ್ದೇವೆ’ ಎಂದು ಕಂಪನಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪರ್ವೀನಾ ಅವರು 2014ರ ಫೆಬ್ರವರಿಯಲ್ಲಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕಂಪನಿ ವಾದ ಏನಾಗಿತ್ತು?: ಮಹಿಳೆ ಖರೀದಿಸಿದ್ದ ವಿಮೆ ಪಾಲಿಸಿಯ ನಿಯಮಗಳ ಪ್ರಕಾರ 1.51 ಲಕ್ಷ ರೂ. ಮಾತ್ರ ನೀಡಲು ಅವಕಾಶವಿದ್ದು, ಈಗಾಗಲೇ 1.34 ಲಕ್ಷ ರೂ. ನೀಡಲಾಗಿದೆ. ಬಾಕಿ ಇರುವುದು 16,871 ರೂ. ಮಾತ್ರ ಎಂದು ಕಂಪನಿ ವಾದಿಸಿತ್ತು. ಆದರೆ ಕಂಪನಿ ಬಳಿ ಸೂಕ್ತ ದಾಖಲೆಗಳಿರಲಿಲ್ಲ. ಮಹಿಳೆ ಬಳಿಯಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರಂಭದಲ್ಲಿ ನೀಡಿದ್ದ ಭರವಸೆಯಂತೆ ಮಹಿಳೆಗೆ ಹೆಚ್ಚುವರಿ 1.03.262 ರೂ. ನೀಡುವಂತೆ  ಕಂಪನಿಗೆ ತಿಳಿಸಿದೆ.

* ಮಂಜುನಾಥ್‌ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next