Advertisement

ಶ್ರಮದಿಂದಲೇ ಮಹಿಳೆ ಅಸ್ತಿತ್ವ: ಡಾ|ಬಾಲಿ

07:39 AM Mar 09, 2019 | Team Udayavani |

ದಾವಣಗೆರೆ: ಸಮಾಜದಲ್ಲಿ ನಮ್ಮ ಅಸ್ತಿತ್ವದ ಉಳಿವಿಗೆ ಶ್ರಮವಹಿಸಿ ಕಾರ್ಯ ನಿರ್ವಹಣೆ ಅನಿವಾರ್ಯ. ಹಾಗಾಗಿ ಸಮಾನತೆಗಾಗಿ ಮಹಿಳೆಯರು ಶ್ರಮಿಕ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮಾಜಿ ಕುಲಪತಿ ಡಾ| ಗೀತಾ ಬಾಲಿ ಹೇಳಿದ್ದಾರೆ. ಶುಕ್ರವಾರ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ಒಬ್ಬ ಮಹಿಳೆ ದುರ್ಬಲಳಾದರೆ ಅದು ಇಡೀ ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎಂದರು. 

Advertisement

ಹಿಂದಿನಿಂದಲೂ ಅಸಮಾನತೆಯಲ್ಲಿ ಬೆಳೆದ ಹೆಣ್ಣು ಪ್ರಸ್ತುತ ಶೈಕ್ಷಣಿಕ ಕ್ಷೇತ್ರದಲ್ಲಿ ಕಲ್ಪಿಸಿದ ಅವಕಾಶ ಉಪಯೋಗಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಿದ್ದಾಳೆ ಎನ್ನುವುದು ಸಮಾಧಾನದ ಸಂಗತಿಯಾದರೂ ಆಕೆಯ ವ್ಯಕ್ತಿ ಚಿತ್ರಣದಲ್ಲಿ ನಾವಿನ್ನೂ ಬದಲಾವಣೆ ಕಂಡಿಲ್ಲ ಎಂಬುದು ವಿಷಾದಕರ ಸಂಗತಿ. ಮಹಿಳೆಯನ್ನು ಅತೀ ರಂಜಕವಾಗಿ ಬಿಂಬಿಸುವ, ಅನಾವಶ್ಯಕವಾಗಿ ಜಾಹೀರಾತುಗಳಲ್ಲಿ ಬಳಸಿಕೊಳ್ಳುವುದು
ಸಮಾಜದ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಬೇಸರಿಸಿದರು.

ಸಮರ್ಪಕವಾದ ಕೆಲಸ ದೊರೆತರೂ ಕೆಲವೊಮ್ಮೆ ಅದನ್ನು ನಿಭಾಯಿಸುವಲ್ಲಿ ಮಹಿಳೆಯರೂ ಹಿಂದೆ ಬೀಳುತ್ತಾರೆ. ಅಶಿಕ್ಷಿತರಿಗಿಂತ ಶಿಕ್ಷಿತ ಮಹಿಳೆಯರಲ್ಲೇ ಈ ತೆರನಾದ ಗಂಭೀರ ಸಮಸ್ಯೆ ಕಾಣುತ್ತಿದ್ದೇವೆ. ಇದರಿಂದ ದೇಶದ ಉತ್ಪಾದನೆ ಮೇಲೆ ಹೊಡೆತ ಬೀಳುತ್ತದೆ. ಹಾಗಾಗಿ ಒಬ್ಬ
ಮಹಿಳೆಯ ಸಾಮರ್ಥ್ಯಕಡಿಮೆಯಾದರೆ ದೇಶದ ಸಾಮರ್ಥ್ಯ ಕಡಿಮೆಯಾದಂತೆ ಎಂದು ಬಣ್ಣಿಸಿದರು.

ವಿಶ್ವವಿದ್ಯಾನಿಲಯಗಳಲ್ಲೂ ಸಹ ಎಲ್ಲಾ ಹುದ್ದೆಗಳಲ್ಲಿ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ. ಈ ಧೋರಣೆ ಬದಲಾಗಿ ಮಹಿಳೆಯರು ತಮ್ಮ ಆಸಕ್ತಿ ಮತ್ತು ಅಭಿರುಚಿಗಳಿಂದ ಉನ್ನತ ಸ್ಥಾನ ತಲುಪಬೇಕೆಂದು ಅವರು ಸಲಹೆ ನೀಡಿದರು.
 
ದಾವಿವಿ ಕುಲಪತಿ ಪ್ರೊ| ಎಸ್‌.ವಿ. ಹಲಸೆ ಮಾತನಾಡಿ, ಮಹಿಳೆ ಯಾವುದೇ ಒತ್ತಡಕ್ಕೆ ಒಳಗಾಗದೇ ಸಮಸ್ಥಿತಿ ಕಾಯ್ದುಕೊಂಡು ಪ್ರಗತಿ ಸಾಧಿಸಬೇಕು. ಶೈಕ್ಷಣಿಕ, ಸಾಮಾಜಿಕವಾಗಿ ಆಕೆಗೆ ಪ್ರೋತ್ಸಾಹ ದೊರೆಯಬೇಕು. ಮಹಿಳೆ ಹಿಂಜರಿಕೆ ತೊರೆದು ಪ್ರತಿಭೆ ಪ್ರದರ್ಶಿಸಿದಾಗ ಮಾತ್ರ ಆಕೆಯ ಕುಟುಂಬ, ಸಮಾಜ, ದೇಶದ ಅಭಿವೃದ್ಧಿ ಸಾಧ್ಯಎಂದರು. 

ದಾವಿವಿ ಕುಲಸಚಿವ ಪ್ರೊ| ಪಿ.ಕಣ್ಣನ್‌ ಮಾತನಾಡಿ, ಲಿಂಗಭೇದ ಒಂದು ಸಾಮಾಜಿಕ ಸಮಸ್ಯೆಯಾಗಿದ್ದು. ಪುರಾಣ ಕಥೆಗಳ ಮೂಲಕ ಅದನ್ನು ನಂಬುವಂತೆ ನಮ್ಮ ಮನಸ್ಥಿತಿ ಸೃಷ್ಟಿಸಲಾಗಿದೆ. ಆ ದರೆ, ವಾಸ್ತವದಲ್ಲಿ ಪ್ರತಿಯೊಬ್ಬ ಗಂಡಿಗೂ ಒಂದು ಹೆಣ್ಣು ಬೇಕೇ ಬೇಕು. ಕೌಟುಂಬಿಕ ವ್ಯವಸ್ಥೆಯಿಂದಲೇ ಈ ಅಸಮಾನತೆ ತೊಡೆಯಬೇಕು ಎಂದು ಹೇಳಿದರು.
 
ಲಿಂಗ ಅಸಮಾನತೆ ವಿರುದ್ಧ ಹೋರಾಡಿದ ಬುದ್ಧ, ಅಂಬೇಡ್ಕರ್‌ ಅವರ ಸಂದೇಶ ನಾವು ಪಾಲಿಸಬೇಕು. ಮಹಿಳೆಯರು ತಮ್ಮ ಸಾಮರ್ಥ್ಯ ಅರಿತುಕೊಂಡು ಅದನ್ನು ಸಮಪರ್ಕವಾಗಿ ಬಳಸಿದಾಗ ಆಕೆಯ ಪರಿಪೂರ್ಣಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

Advertisement

ದಾವಣಗೆರೆ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಪ್ರೊ| ಬಸವರಾಜ್‌ ಬಣಕಾರ, ವಿಜ್ಞಾನ ವಿಭಾಗದ ಡೀನ್‌ ಪ್ರೊ| ಗಾಯತ್ರಿ ದೇವರಾಜ್‌, ಇತರರು ಈ ಸಂದರ್ಭದಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next