Advertisement

ರೂಪಾಯಿ ಮೌಲ್ಯ ಸುಸ್ಥಿರಕ್ಕೆ ಬೇಕಿದೆ ಸಮಗ್ರ ನೀತಿ

03:01 PM Nov 24, 2018 | |

ದಾವಣಗೆರೆ: ಹಣದುಬ್ಬರದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ಭಾರತೀಯ ರೂಪಾಯಿ ಮೌಲ್ಯ ಸುಸ್ಥಿರಗೊಳಿಸಲು ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸಮಗ್ರ ನೀತಿ ರೂಪಿಸುವ ಅಗತ್ಯತೆ ಇದೆ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ| ಆರ್‌.ಎಸ್‌. ದೇಶಪಾಂಡೆ ಪ್ರತಿಪಾದಿಸಿದ್ದಾರೆ.

Advertisement

ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಲಾಗಿರುವ ಭಾರತೀಯ ಅರ್ಥಶಾಸ್ತ್ರ-2018 ಸುಸ್ಥಿರ ಅಭಿವೃದ್ಧಿಗೆ ಸಮಸ್ಯೆಗಳು ಮತ್ತು ತಂತ್ರಗಾರಿಕೆ ಕುರಿತು ಎರಡು ದಿನಗಳ ವಿಚಾರ ಸಂಕಿರಣ ಶುಕ್ರವಾರ ಉದ್ಘಾಟಿಸಿ, ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಸುಸ್ಥಿರಗೊಳಿಸಲು ರಿಸರ್ವ್‌ ಬ್ಯಾಂಕ್‌ ಹಣಕಾಸು ಸಂಬಂಧ  ನೀತಿ ನಿಯಮಗಳನ್ನು ಉತ್ತಮಗೊಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.

ಆರ್ಥಿಕತೆಯ ನೀತಿ ನಿಯಮಾವಳಿಗಳಲ್ಲಿ ಶಿಸ್ತುಬದ್ಧತೆ ಕಾಪಾಡಿಕೊಳ್ಳುವ ಮೂಲಕ ದೇಶದ ಜಿಡಿಪಿಯಲ್ಲಿ ಪ್ರಗತಿ ಕಂಡುಕೊಳ್ಳಬೇಕು. ದೇಶದ ಜಿ.ಡಿ.ಪಿ ಬೆಳವಣಿಗೆಯನ್ನು ನಿಯಂತ್ರಿತ ಹಣದುಬ್ಬರದ ಮುಖಾಂತರ ಸಾಧಿಸಬೇಕು. ಜಿ.ಡಿ.ಪಿಯನ್ನು ಸುಸ್ಥಿರಗೊಳಿಸಲು ಆರ್ಥಿಕ ನೀತಿ ಮತ್ತು ನಿಯಮಗಳಲ್ಲಿ ಶಿಸ್ತು ಬದ್ಧತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಕೃಷಿ ಕ್ಷೇತ್ರ ನಿರಂತರವಾಗಿ ಸಮಸ್ಯೆ ಎದುರಿಸುತ್ತಿದೆ. ರೈತರು ಬೇಡಿಕೆ ಈಡೇರಿಸಿಕೊಳ್ಳಲು ಪ್ರತಿದಿನ ಸರ್ಕಾರದ ವಿರುದ್ಧ ಹೋರಾಟ ನಡೆಸುವಂತಾಗಿದೆ. ಬರಗಾಲದ ಸನ್ನಿವೇಶ ವ್ಯವಸ್ಥಿತವಾಗಿ ನಿಭಾಯಿಸಲು ದೇಶದ ಅನೇಕ ಭಾಗಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
 
ಆ ನಿಟ್ಟಿನಲ್ಲಿ ತೆಲಂಗಾಣ ಮಾದರಿ ಯೋಜನೆ ಅನುಕರಣೀಯ. ರೈತರಿಗೆ ಬರ ಪರಿಸ್ಥಿತಿಗಳಲ್ಲಿ ನೇರ ಹಣ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಪ್ರಮುಖವಾಗಿ ಗುರುತಿಸಲ್ಪಟ್ಟಿದೆ. ಮಾರುಕಟ್ಟೆ ಸೌಲಭ್ಯವು ಕೂಡ ಪ್ರಮುಖ ಸಮಸ್ಯೆಯಾಗಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ವಿ. ಹಲಸೆ ಮಾತನಾಡಿ, ದೇಶ ಸರ್ವತೋಮುಖವಾಗಿ ಅಭಿವೃದ್ಧಿಯಾಗಬೇಕೆಂದರೆ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಬೇಕು. ಆರ್ಥಿಕತೆ ದೇಶದ ಅಡಿಪಾಯ. ದೇಶದಲ್ಲಿನ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಆರ್ಥಿಕತೆಯಲ್ಲಿನ ವೈಫಲ್ಯವೇ ಮೂಲ ಕಾರಣ. ದೇಶದ ಆರ್ಥಿಕತೆ ಪ್ರತಿ ಪ್ರಜೆಯ ಆರ್ಥಿಕ ಸ್ಥಿತಿಗತಿ ಮೇಲೆ ಅವಲಂಬಿತವಾಗಿರುತ್ತದೆ. ಆ ನಿಟ್ಟಿನಲ್ಲಿ ಈ ರೀತಿಯ ವಿಚಾರ ಸಂಕಿರಣಗಳಿಂದ ಹೊರಬರುವ ವರದಿಗಳು ಸರ್ಕಾರದ
ಮಟ್ಟದಲ್ಲಿ ಚರ್ಚೆಗೆ ಒಳಪಡುವಂತಾಗಬೇಕು ಎಂದು ಆಶಿಸಿದರು.

Advertisement

ದಾವಿವಿ ಕುಲಸಚಿವ ಪ್ರೊ| ಪಿ. ಕಣ್ಣನ್‌ ಮಾತನಾಡಿ, ಉತ್ಪಾದನೆಯಲ್ಲಿನ ರಾಜಕೀಯ, ಕಪ್ಪು ಆರ್ಥಿಕತೆ ಮತ್ತು ಆರ್ಥಿಕತೆಯೆಡಗಿನ ಪ್ರಜೆಗಳ ವರ್ತನೆಗಳು ಚರ್ಚೆಗೆ ಒಳಪಡಿಸುವ ಅಗತ್ಯವಿದೆ. ಸಮಾಜದಲ್ಲಿ ಕಾರ್ಮಿಕರಿಗೆ ನೀಡುವ ವೇತನದಲ್ಲಿ ತಾರತಮ್ಯ ಇದೆ. ಕಡಿಮೆ ಸಂಬಳಕ್ಕಾಗಿ ಕಾರ್ಮಿಕರು ದುಡಿಯುತ್ತಾರೆ ಎಂಬ ಕಾರಣಕ್ಕಾಗಿ ಅಸಮರ್ಥರನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.

ಕಾರ್ಮಿಕ ವರ್ಗದ ದತ್ತಾಂಶ ಸಂಗ್ರಹಣೆಯ ವರದಿಯ ಪ್ರಕಾರ ಕೇವಲ ಶೇ. 50ರಷ್ಟು ಮಾಹಿತಿ ಮಾತ್ರ ನಮ್ಮಲ್ಲಿ ಲಭ್ಯವಿದೆ. ಉಳಿದ ಕಾರ್ಮಿಕರ ಆರ್ಥಿಕತೆಯ ವಹಿವಾಟಿನ ಬಗ್ಗೆ ಮಾಹಿತಿಯೇ ಇಲ್ಲ. ಸಮಾಜದಲ್ಲಿ ಹಣದ ಹರಿವು ಸಹ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಭಾರತದಲ್ಲಿ ಹಣದ ಹರಿವಿಗಿಂತ ಹಣದ ಸಂಗ್ರಹವೇ ಹೆಚ್ಚಿರುವುದು ಆರ್ಥಿಕತೆಯ ವೈಫಲ್ಯಕ್ಕೆ ಕಾರಣವಾಗಿದೆ
ಎಂದು ವಿಶ್ಲೇಷಿಸಿದರು.

ಕಲಾ ನಿಕಾಯ ವಿಭಾಗದ ಮುಖ್ಯಸ್ಥ ಪ್ರೊ| ಬಿ.ಪಿ. ವೀರಭದ್ರಪ್ಪ, ಪ್ರಾಧ್ಯಾಪಕರಾದ ಪ್ರೊ| ಎನ್‌.ಕೆ ಗೌಡ, ಪ್ರೊ| ಕೆ.ಬಿ. ರಂಗಪ್ಪ, ಎಸ್‌. ಸುಚಿತ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next