ನವದೆಹಲಿ: ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧವನ್ನು ವಿರೋಧಿಸಿ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಒತ್ತಾಯಿಸಿ ಸಂಸತ್ ಸಮೀಪ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಅನು ದುಬೆ(20ವರ್ಷ) ಎಂಬಾಕೆ, ನನ್ನ ಭಾರತದಲ್ಲಿ ಯಾಕೆ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂಬ ಬರಹವನ್ನು ಹಿಡಿದು ಸಂಸತ್ ಸಮೀಪದ 2-3ನೇ ನಂಬರಿನ ದ್ವಾರದ ಸಮೀಪ ಕುಳಿತು ಪ್ರತಿಭಟನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂಸತ್ ಸಮೀಪ ಪ್ರತಿಭಟನೆ ನಡೆಸಬೇಡಿ, ಜಂತರ್ ಮಂತರ್ ಗೆ ಹೋಗಿ ಪ್ರತಿಭಟನೆ ಮುಂದುವರಿಸುವಂತೆ ಆಕೆ ಬಳಿ ಮನವಿ ಮಾಡಿದ್ದೇವು. ಆದರೆ ಅದನ್ನು ನಿರಾಕರಿಸಿದಾಗ ವಶಕ್ಕೆ ಪಡೆದಿರುವುದಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸರು ತಿಳಿಸಿದ್ದಾರೆ.
ಆಕೆಯ ಅಸಮಾಧಾನ ಹೊಂದಿರುವ ಕಾರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ವಿವರಣೆ ಕೇಳಿದ ನಂತರ ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ದುಬೆ, ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಪ್ರತಿಭಟನಾ ನಿರತ ಯುವತಿಗೆ ದೆಹಲಿ ಪೊಲೀಸರು ಹೊಡೆದಿರುವುದಾಗಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.