ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿ ಆಯೋಜಿಸಿದ್ದ ಉದ್ಯೋಗಿಗಳ ಸಭೆಯಲ್ಲಿ ಪಾಲ್ಗೊಂಡು ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಕೊಲ್ಕತಾ ಮೂಲದ ಮಹಿಳೆಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಬಲವಂತವಾಗಿ ಸಿಗರೇಟ್ ಸೇದಿಸಿ ಅತ್ಯಾಚಾರಕ್ಕೆ ಯತ್ನಿಸಿದ ಸಹೋದ್ಯೋಗಿಯನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಖರ್ಜಿ (22) ಬಂಧಿತ ಆರೋಪಿ. ಅಂತಾರಾಷ್ಟ್ರೀಯ ಜವಳಿ ಸಂಸ್ಥೆಯೊಂದು ತನ್ನ ಸಹೋದ್ಯೋಗಿಗಳಿಗೆ ನಗರದ ಐಷಾರಾಮಿ ಹೋಟೆಲ್‌ನಲ್ಲಿ ಫೆ.8 ಹಾಗೂ 9ರಂದು ಸಭೆ ಆಯೋಜಿಸಿತ್ತು. ಸಭೆಗೆ ಹೊರ ರಾಜ್ಯಗಳಿಂದ ಆಗಮಿಸಿದ ಉದ್ಯೋಗಿಗಳಿಗೆ ಗೊರಗುಂಟೆ ಪಾಳ್ಯದಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿತ್ತು. ಕೊಲ್ಕತಾ ಮೂಲದ ಮಹಿಳೆ ಪ್ರತ್ಯೇಕ ಕೊಠಡಿಯಲ್ಲಿ ಉಳಿದುಕೊಂಡಿದ್ದರು.
ಫೆ.8ರಂದು ರಾತ್ರಿ 11.45ರ ಸುಮಾರಿಗೆ ಆರೋಪಿ, ಮಹಿಳೆಯಿದ್ದ ಕೊಠಡಿಯ ಬಾಗಿಲು ಬಡಿದಿದ್ದಾನೆ. ಮಹಿಳೆ ಬಾಗಿಲು ತೆಗೆದ ಕೂಡಲೇ ನೀರು ಕೇಳುವ ನೆಪದಲ್ಲಿ ಒಳನುಗ್ಗಿದ್ದಾನೆ. ಕಂಠಪೂರ್ತಿ ಮದ್ಯ ಸೇವಿಸಿದ್ದ ಮುಖರ್ಜಿ, ಮಹಿಳೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.
ಆಕೆ ಕಿರುಚಿಕೊಳ್ಳದಂತೆ ಬಾಯಿಮುಚ್ಚಿದ ಆತ, ಆಕೆಯನ್ನು ಸ್ನಾನಗೃಹಕ್ಕೆ ಎಳೆದೊಯ್ದು ಬಾಗಿಲು ಮುಚ್ಚಿದ್ದಾನೆ. ಬಲವಂತವಾಗಿ ಆಕೆಯ ಬಾಯಲ್ಲಿ ಸಿಗರೇಟ್ ಇರಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಮಲಗುವ ಕೊಠಡಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ, ಆಕೆಯ ತಲೆಯನ್ನು ಗೋಡೆಗೆ ಗುದ್ದಿ, ಹಲ್ಲೆ ನಡೆಸಿದ.
ತನಗೆ ಆರೋಗ್ಯ ಸರಿಯಿಲ್ಲ ಎಂದು ಬೇಡಿಕೊಂಡರೂ ಆತ ಕಿರುಕುಳ ಮುಂದುವರಿಸಿದ್ದ. ಬಳಿಕ ಕಿರುಚಿಕೊಳ್ಳಲು ಆರಂಭಿಸುತ್ತಿದ್ದಂತೆ, ಯಾರಿಗೂ ಹೇಳದಿದ್ದರೆ ಬಿಟ್ಟುಬಿಡುತ್ತೇನೆ ಎಂದು ಹೇಳಿ ಬಲವಂತವಾಗಿ ಚುಂಬಿಸಿ ತೆರಳಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ಕೃತ್ಯದಿಂದ ಆಘಾತಗೊಂಡ ಸಂತ್ರಸ್ತೆ, ತಮ್ಮ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಜತೆಗೆ ಹೋಟೆಲ್ ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಹೋಟೆಲ್ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆಯಲಾಯಿತು. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಆರೋಪಿ ಮುಖರ್ಜಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.