ಮನಾಮಾ(ಬಹ್ರೇನ್): ಮಹಿಳೆಯೊಬ್ಬಳು ಗಣೇಶ ಮೂರ್ತಿಯನ್ನು ಅಪವಿತ್ರಗೊಳಿಸಿದ ಹಾಗೂ ಉದ್ದೇಶಪೂರ್ವಕವಾಗಿ ಹಾನಿಗೊಳಿಸಿ, ಸಾರ್ವಜನಿಕವಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಘಟನೆ ಬಹ್ರೇನ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಮನಾಮಾದ ಜುಫೇರ್ ಪ್ರದೇಶದಲ್ಲಿನ ಅಂಗಡಿಯೊಂದರಲ್ಲಿ 54ವರ್ಷದ ಮಹಿಳೆಯೊಬ್ಬಳು ಉದ್ದೇಶಪೂರ್ವಕವಾಗಿ ಗಣೇಶನ ವಿಗ್ರಹವನ್ನು ಭಗ್ನಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಮಹಿಳಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಗಣೇಶನ ವಿಗ್ರಹವನ್ನು ಅಪವಿತ್ರಗೊಳಿಸಿ, ಭಗ್ನಗೊಳಿಸಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೇ ಧಾರ್ಮಿಕ ಚಿಹ್ನೆ(ಸಂಕೇತ)ಕ್ಕೆ ಅಪಮಾನ ಮಾಡಿರುವ ಬಗ್ಗೆ ಹಲವಾರು ಕ್ರಿಮಿನಲ್ ಆರೋಪ ದಾಖಲಾಗಿದೆ ಎಂದು ವಿವರಿಸಿದೆ.
ಘಟನೆ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ವಿಡಿಯೋದಲ್ಲಿ, ಅಂಗಡಿಯಲ್ಲಿ ಮಹಿಳೆಯೊಬ್ಬಳು ಮೂರ್ತಿಯ ಬಳಿ ನಿಂತು ಅಪವಿತ್ರಗೊಳಿಸಿರುವುದು ಸೆರೆಯಾಗಿತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಭಾರೀ ಖಂಡನೆ ವ್ಯಕ್ತವಾಗಿತ್ತು ಎಂದು ವರದಿ ತಿಳಿಸಿದೆ.
ಮಹಿಳೆಯ ಈ ಕೃತ್ಯ ಕ್ಷಮಾರ್ಹವಲ್ಲ ಎಂದು ಬಹ್ರೇನ್ ರಾಜನ ಸಲಹೆಗಾರ ಖಾಲೀದ್ ಅಲ್ ಖಲೀಫಾ ತಿಳಿಸಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ, ಮೂರ್ತಿ ಭಗ್ನಗೊಳಿಸುವುದು ಬಹ್ರೇನ್ ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.