Advertisement
ಕೊಲೆಯಾದ ಶ್ರೀಮತಿ ಶೆಟ್ಟಿ ಅವರ ಸ್ಕೂಟರ್ ಸೋಮವಾರ ರಾತ್ರಿ ನಾಗುರಿ ಬಳಿ ರಸ್ತೆ ಬದಿ ಅನಾಥವಾಗಿ ಪತ್ತೆಯಾಗಿದೆ. ಸ್ಕೂಟರ್‌ನಲ್ಲಿದ್ದ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
ಮಹಿಳೆ ಶ್ರೀಮತಿ ಶೆಟ್ಟಿ ಅತ್ತಾವರ ಸಮೀಪ ಎಲೆಕ್ಟ್ರಿಕಲ್ ಉತ್ಪನ್ನಗಳ ದುರಸ್ತಿ ಅಂಗಡಿಯನ್ನು ನಡೆಸುತ್ತಿದ್ದರು. ಪ್ರತಿನಿತ್ಯ 9 ಗಂಟೆಗೆ ಅಂಗಡಿಗೆ ಹೋಗುತ್ತಿದ್ದರು. ಯಾವಾಗಲೂ ಕಾರಿನಲ್ಲಿ ತೆರಳುತ್ತಿದ್ದ ಶ್ರೀಮತಿ ಶೆಟ್ಟಿ ಶನಿವಾರ ಮಾತ್ರ ಸ್ಕೂಟರ್‌ನಲ್ಲಿ ತೆರಳಿದ್ದರು. ಆದರೆ ಅಂದು ಅಂಗಡಿಗೆ ತೆರಳಿರಲಿಲ್ಲ. ಬದಲಾಗಿ ಆಕೆ ತನ್ನ ಸ್ಕೂಟರ್‌ನಲ್ಲಿ ಅತ್ತಾವರದಿಂದ ಗೋರಿಗುಡ್ಡೆ ಕಡೆಗೆ ತೆರಳಿರುವುದು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ.
Advertisement
ಅತ್ತಾವರದ ಕೆಎಂಸಿಯಿಂದ ಬಳಿಯಿಂದ ಬಿಳಿ ಬಣ್ಣದ ಸ್ಕೂಟರ್‌ನ್ನು ಚಲಾಯಿಸಿಕೊಂಡು ಮಹಿಳೆ ಹೊರಟಿದ್ದು, ಅಲ್ಲಿಂದ ಮಂಗಳಾ ಬಾರ್ ಮಾರ್ಗವಾಗಿ ರೋಶನಿ ನಿಲಯದ ಎದುರು ಭಾಗದಲ್ಲಿ ಮುಂದಕ್ಕೆ ಹೋಗಿದ್ದಾರೆ. ಮುಂದೆ ವೆಲೆನ್ಸಿಯಾ ಸರ್ಕಲ್‌ಗೆ ತೆರಳಿ ಅಲ್ಲಿಂದ ಬಲಕ್ಕೆ ತಿರುಗಿ ಗೋರಿಗುಡ್ಡ ಕಡೆಗೆ ಸುಮಾರು 9- 9:30ರ ನಡುವೆ ಹೋಗಿದ್ದಾರೆ.
ಆಕೆ ಕಪ್ಪು ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿ ತೆರಳುತ್ತಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ. ಇಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಜೈಲಿನಲ್ಲಿದ್ದ ಪತಿಯ ವಿಚಾರಣೆ ಕೊಲೆಯಾದ ಶ್ರೀಮತಿ ಶೆಟ್ಟಿ ಅವರ 2ನೇ ಪತಿ ಸುದೀಪ್ ಮಂಗಳೂರಿನ ಜೈಲಿನಲ್ಲಿ ಇರುವುದರಿಂದ ತನಿಖಾ ತಂಡ ಸೋಮವಾರ ಜೈಲಿಗೆ ತೆರಳಿ ವಿಚಾರಣೆ ನಡೆಸಿದೆ. ಸುದೀಪ್ ಮೇಲೆ ನಗರದ ಕೆಲವು ಠಾಣೆಗಳಲ್ಲಿ ಕಳವು ಆರೋಪದ ಪ್ರಕರಣಗಳಿದ್ದ ಕಾರಣ ಆತ ಜೈಲು ಪಾಲಾಗಿದ್ದ. ಶ್ರೀಮತಿ ಶೆಟ್ಟಿ ಹಾಗೂ ಸುದೀಪ್ ಸಂಬಂಧದಲ್ಲಿಯೂ ಬಿರುಕು ಉಂಟಾಗಿದ್ದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾ ಗಿ ತ್ತು.ಈ ಹಿನ್ನೆಲೆಯಲ್ಲಿ ಸುದೀಪ್ ಪತ್ನಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಮೂರು ತಂಡಗಳಿಂದ ತನಿಖೆ
ಮಹಿಳೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಷನರ್ ಸಂದೀಪ್ ಪಾಟೀಲ್ ಅವರು ತನಿಖೆಗೆ ಮೂರು ತಂಡಗಳನ್ನು (ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಸಿಸಿಬಿ ಪೊಲೀಸರ ತಂಡ ಮತ್ತು ಮಂಗಳೂರು ನಗರ ಕೇಂದ್ರೀಯ ಎಸಿಪಿ ನೇತೃತ್ವದ ತಂಡ) ರಚಿಸಿದ್ದು, ಮೂರೂ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.