Advertisement

ಕುವೈಟ್‌ ಗೃಹಬಂಧನದಿಂದ ಮಹಿಳೆ ಪಾರು

12:33 AM Sep 22, 2019 | Team Udayavani |

ಮಂಗಳೂರು: “ಕಳೆದ 8 ತಿಂಗಳಲ್ಲಿ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಒಂದೆಡೆ ಮಗ ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆಯಲ್ಲಿದ್ದಾನೆ. ಅಮ್ಮನಿಗೂ ಹುಷಾರಿಲ್ಲ. ಪತಿಯನ್ನೂ ಕಳೆದುಕೊಂಡಿರುವ ನನಗೆ ಜೀವನ ನಿರ್ವಹಣೆಯೇ ಅಸಾಧ್ಯ ಎನ್ನುವ ಸ್ಥಿತಿ ಬಂದಿದೆ. ಇಂಥ ಕಷ್ಟ ಇನ್ಯಾರಿಗೂ ಬಾರದಿರಲಿ.’

Advertisement

ಮನೆಗೆಲಸಕ್ಕೆಂದು ಕುವೈಟ್‌ಗೆ ಹೋಗಿ ಸಂಕಷ್ಟಕ್ಕೆ ಸಿಲುಕಿ ಅನಂತರ ಭಾರತದ ರಾಯಭಾರ ಕಚೇರಿ ಹಾಗೂ ಅನಿವಾಸಿ ಕನ್ನಡಿಗರ ನೆರವಿನೊಂದಿಗೆ ಶನಿವಾರ ತಾಯ್ನಾಡಿಗೆ ವಾಪಸಾಗಿರುವ ಮಂಗಳೂರು ಬೆಂಗ್ರೆಯ ರೇಷ್ಮಾ ಸುವರ್ಣರ ನೋವಿನ ಕಥೆಯಿದು.

ರೇಷ್ಮಾ ಸದ್ಯಕ್ಕೆ ಶಿರಡಿಯಲ್ಲಿರುವ ಗಂಡನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಗೃಹಬಂಧನದಿಂದ ಪಾರಾದ ಖುಶಿಯಲ್ಲಿರುವಾಗಲೇ ಮತ್ತೂಂದು ಸಂಕಷ್ಟ ಎದುರಾಗಿದೆ. ಮುದ್ದಿನ ಮಗ ಜ್ವರದಿಂದ ಆಸ್ಪತ್ರೆ ಸೇರಿದ್ದಾನೆ. ಚಿಕಿತ್ಸೆಗೆ ಬಿಡಿಗಾಸೂ ಇಲ್ಲದಿರುವಾಗ ಭವಿಷ್ಯ ಹೇಗೆಂಬ ಚಿಂತೆ ಕಾಡುತ್ತಿದೆ.

ಮಂಗಳೂರಿನ ಏಜೆಂಟರೊಬ್ಬರ ಮುಖಾಂತರ ಕುವೈಟ್‌ಗೆ ಹೋಗಿದ್ದ 37 ವರ್ಷದ ಬೆಂಗ್ರೆಯ ರೇಷ್ಮಾಗೆ ಅಲ್ಲಿನ ಸಂಸ್ಥೆ ಸರಿಯಾಗಿ ವೇತನ ನೀಡಿಲ್ಲ. ಮನೆ ಮಾಲಕರಿಂದ ಮಾನಸಿಕ-ದೈಹಿಕ ಹಿಂಸೆಯನ್ನೂ ಅನುಭವಿಸಬೇಕಾಗಿ ಬಂದಿತ್ತು. 140 ಕೆ.ಡಿ. (32,000 ರೂ.) ಹಣ ನೀಡುತ್ತೇನೆ ಎಂಬ ಒಪ್ಪಂದವಾದರೂ ನೀಡಿದ್ದು 120 ಕೆ.ಡಿ. ಅದು ಕೂಡ ತಿಂಗಳಿಗೆ ಸರಿಯಾಗಿ ಸಿಗುತ್ತಿರಲಿಲ್ಲ.

ಕುವೈಟ್‌ ಸೇರಿದಂದೇ ಪತಿಯ ನಿಧನ ರೇಷ್ಮಾ ಕುವೈಟ್‌ ಸೇರಿದಂದೇ ಪತಿ ತೀರಿಕೊಂಡಿ ದ್ದರು. ಉದ್ಯೋಗದಾತರಲ್ಲಿ ಮನವಿ ಮಾಡಿದರೂ ವಾಪಸ್‌ ಬರಲು ಅನುಮತಿ ನೀಡಿರಲಿಲ್ಲ.

Advertisement

ಕೆಲವು ತಿಂಗಳ ಹಿಂದೆ ಸ್ವತಃ ರೇಷ್ಮಾ ಆಡಿಯೋ ಸಂದೇಶವೊಂದನ್ನು ಜಾಲತಾಣದಲ್ಲಿ ಹರಿಯಬಿಟ್ಟು ತನಗೆ ನೆರವಾಗುವಂತೆ ಮನವಿ ಮಾಡಿದ್ದರು. ಕುವೈಟ್‌ನಲ್ಲಿರುವ ಕರಾವಳಿ ಮೂಲದ ಮಾಧವ ನಾೖಕ್‌, ದಿನೇಶ್‌ ಸುವರ್ಣ, ರಾಜ್‌ ಭಂಡಾರಿ, ಮೋಹನ್‌ದಾಸ್‌ ಕಾಮತ್‌ ಅವರು ಆಕೆಯನ್ನು ರಕ್ಷಿಸಿ ಭಾರತದ ರಾಯಭಾರ ಕಚೇರಿಗೆ ಕರೆದೊಯ್ದರು.

ಬಾಣಲೆಯಿಂದ ಬೆಂಕಿಗೆ…!
“ರಾಯಭಾರ ಕಚೇರಿ ಶೆಲ್ಟರ್‌ನಲ್ಲಿ 2 ತಿಂಗಳು 10 ದಿನ ಕಳೆದೆ. ಅಲ್ಲಿಯೂ ತುಂಬಾ ಸಮಸ್ಯೆ ಅನುಭವಿಸಬೇಕಾಯಿತು. ಮೂಲ ಸೌಕರ್ಯಗಳೇ ಇಲ್ಲದ ಅಲ್ಲಿ ಧರಿಸಲು ಸಮರ್ಪಕ ವಸ್ತ್ರವೂ ಸಿಗಲಿಲ್ಲ. ಕೆಲವು ದಿನಗಳ ಕಾಲ ಜೈಲಿನಲ್ಲೂ ಇರಿಸಿದರು. ಇನ್ನೂ ಅನೇಕ ಮಹಿಳೆಯರು ಅಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಾರಣ
ಕೇಳಿದರೂ ಅಧಿಕಾರಿಗಳು ಸರಿಯಾಗಿ ಉತ್ತರಿಸುತ್ತಿರಲಿಲ್ಲ’ ಎಂದರು ರೇಷ್ಮಾ.

ಮಗಳು ಸುರಕ್ಷಿತವಾಗಿ ಮರಳಿದ್ದಾಳೆ ಎಂಬ ಖುಷಿ ಬಿಟ್ಟರೆ ಬೇರೇನೂ ಇಲ್ಲ. ಶನಿವಾರ ಅವಳೊಂದಿಗೆ 10 ನಿಮಿಷ ಮಾತನಾಡಿದ್ದು, ಮುಂಬಯಿಗೆ ತಲುಪಿರುವುದಾಗಿ ಹೇಳಿದ್ದಳು. ಕುವೈಟ್‌ಗೆ ಹೋದ ಆರಂಭದಲ್ಲಿ ಪ್ರತೀ ತಿಂಗಳು ಸ್ವಲ್ಪ ಹಣ ಕಳುಹಿಸುತ್ತಿದ್ದಳು. ಕೆಲವು ತಿಂಗಳಿನಿಂದ ಅದೂ ಇಲ್ಲ. ತೀರ ಬಡವರಾಗಿರುವ ನಮ್ಮ ಕುಟುಂಬದ ನಿರ್ವಹಣೆಯೇ ಕಷ್ಟವಾಗಿದೆ. ಮಗಳ ಆಗಮನವನ್ನೇ ಎದುರು ನೋಡುತ್ತಿದ್ದೇವೆ.
– ಭಾನುಮತಿ, ರೇಷ್ಮಾ ಅವರ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next