Advertisement

ಪತಿಯಿಂದ 1.08 ಲಕ್ಷ ಪರಿಹಾರ ಕೇಳಿದ ಮಹಿಳೆಗೆ ಸಿಕ್ಕಿದ್ದು…

11:47 AM Aug 11, 2017 | Team Udayavani |

ಬೆಂಗಳೂರು: ಶರವೇಗದಲ್ಲಿ ಬೆಳೆಯುತ್ತಿರುವ ಸಿಲಿಕಾನ್‌ ಸಿಟಿಯಲ್ಲಿ ಇಬ್ಬರು ಆರಾಮದಾಯಕ ಜೀವನ ನಡೆಸಲು ತಿಂಗಳಿಗೆ ಬರೋಬ್ಬರಿ 1.08 ಲಕ್ಷ ರೂಪಾಯಿ ಅಗತ್ಯವಿದೆ!  ಹೌದಾ..? ಎಂದು ಹುಬ್ಬೇರಿಸಬೇಡಿ! 

Advertisement

ಬೆಂಗಳೂರಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮಗೆ ತಿಂಗಳಿಗೆ 1ಲಕ್ಷ 8 ಸಾವಿರ ರೂಪಾಯಿ ಅಗತ್ಯತೆವಿದೆ ಎಂದು ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ. ವೈಟ್‌ ಫೀಲ್ಡ್‌ ನಿವಾಸಿಯಾದ ಈ ಮಹಿಳೆ ತನ್ನ ಹಾಗೂ ಮಗನ ತಿಂಗಳ ಜೀವನಕ್ಕೆ ಅಮೆರಿಕಾದ ವಿಚ್ಛೇದಿತ ಗಂಡನಿಂದ ಮಾಸಿಕ ಜೀವನಾಂಶದ ರೂಪದಲ್ಲಿ 1.08 ಲಕ್ಷ ರೂ. ಕೊಡಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಅರ್ಜಿದಾರ ಮಹಿಳೆ ತನ್ನ ಹಾಗೂ ಮಗನ ಜೀವನ ಖರ್ಚಿಗೆ ಪ್ರತಿ ತಿಂಗಳ ಜೀವನ ನಿರ್ವಹಣೆಗೆ ಅಗತ್ಯವಿರುವ ಹಣದ ಬಗ್ಗೆ ನಿಖರ ದಾಖಲೆಗಳನ್ನು ಒದಗಿಸುವಲ್ಲಿ ವಿಫ‌ಲರಾಗಿದ್ದಾರೆ. ಈ ಹಿಂದೆ ಅಧೀನ ನ್ಯಾಯಾಲಯಗಳು ನೀಡಿದ್ದ ಆದೇಶಗಳಂತೆ ತನ್ನ ವಿಚ್ಛೇದಿತ ಪತಿಯಿಂದ ಮಾಸಿಕ 30.ಸಾವಿರ ರೂ. ಪಡೆದುಕೊಳ್ಳಬಹುದು ಎಂದು ಇತ್ತೀಚೆಗೆ ಆದೇಶ ನೀಡಿದೆ.

ರಾಜಧಾನಿಯಲ್ಲಿ ತಿಂಗಳಿಗೆ 30,000 ಸಾವಿರ ರೂ.ಗಳಲ್ಲಿ ತಾಯಿ ಹಾಗೂ ಮಗ ಜೀವನ ನಡೆಸಬಹುದು  ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಈ ಅರ್ಜಿಯಲ್ಲಿ ಅರ್ಜಿದಾರ ಮಹಿಳೆ ಮಾಡಿರುವ ಅಗತ್ಯ ಖರ್ಚು ವೆಚ್ಚಗಳ ಬಗ್ಗೆ ನಿಖರ ದಾಖಲೆಗಳಿಲ್ಲದೆ ಆಕೆಯ ಸ್ವಯಂ ಸಮರ್ಥನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಜೊತೆಗೆ ವಿಚ್ಛೇದಿತ ಗಂಡನ ತಿಂಗಳ ಆದಾಯ ಮೂಲದ ಬಗ್ಗೆ ನಿಖರ ಮಾಹಿತಿ ಒದಗಿಸಿಲ್ಲ. ಹೀಗಾಗಿ ಈಗಾಗಲೇ ಅಧೀನ ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಮಾರ್ಪಾಡು ಮಾಡುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿರುವ ನ್ಯಾಯಪೀಠ, ಅರ್ಜಿ ವಿಲೇವಾರಿಗೊಳಿಸಿದೆ.

Advertisement

ಪ್ರಕರಣವೇನು? 
ದೆಹಲಿ ಮೂಲದ ರೇಷ್ಮಾ (51)ಹಾಗೂ ಅಮೆರಿಕಾದ ಜೀವನ್‌ (ಇಬ್ಬರ ಹೆಸರೂ ಬದಲಿಸಲಾಗಿದೆ) 2001ರಲ್ಲಿ ವಿವಾಹವಾಗಿದ್ದು, 2003ರಲ್ಲಿ ಮಗ ಜನಿಸಿದ್ದಾನೆ. ಮಗ ಹಾಗೂ ಗಂಡನ ಜೊತೆ ಅಮೆರಿಕಾದಲ್ಲಿಯೇ ವಾಸವಿದ್ದ ರೇಷ್ಮಾ 2007ರಲ್ಲಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.  

ಅಲ್ಲದೆ 2016ರಲ್ಲಿ  ವಿವಾಹವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಲೇವಾರಿಗೊಳಿಸಿದ ನ್ಯಾಯಾಲಯ, ಪ್ರತಿ ತಿಂಗಳು ಪತ್ನಿ ಹಾಗೂ ಮಗನ ಜೀವನ ನಿರ್ವಹಣೆಗೆ ರೂ. 10 ಸಾವಿರ ರೂ ನೀಡುವಂತೆ ಆದೇಶಿಸಿತ್ತು. 

ಇದಾದ ಬಳಿಕ ಕೆಲದಿನಗಳ ಕಾಲ ಸುಮ್ಮನಿದ್ದ ರೇಷ್ಮಾ, ತನ್ನ ಹಾಗೂ ಮಗನ ಜೀವನ ನಿರ್ವಹಣೆಗೆ ತನ್ನ ಗಂಡನಿಂದ 1.08 ಲಕ್ಷ ರೂ ಮಾಸಿಕ ಜೀವನಾಂಶ ಕೊಡಿಸಬೇಕು ಎಂದು ಕೋರಿ ಸಿವಿಲ್‌ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ, ಪ್ರತಿ ತಿಂಗಳು 20 ಸಾವಿರ ರೂ. ನೀಡುವಂತೆ ಪ್ರತಿವಾದಿಗೆ ಆದೇಶಿಸಿ  ಅರ್ಜಿ ಇತ್ಯರ್ಥಪಡಿಸಿತ್ತು.

ವಿಚ್ಛೇದಿತ ಪತಿ ಕಂಪೆನಿಯೊಂದರ ಸಹಸಂಸ್ಥಾಪಕ – ತಿಂಗಳಿಗೆ 1.08 ಲಕ್ಷ  ರೂ. ನೀಡಲಿ 
ಸಿವಿಲ್‌ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ರೇಷ್ಮಾ, ವಿಚ್ಛೇದಿತ ಪತಿ ಅಮೆರಿಕಾದ ಮಾಹಿತಿ ತಂತ್ರಜ್ಞಾನದ ಕಂಪೆನಿಯೊಂದರ ಸಹ ಸಂಸ್ಥಾಪಕರಾಗಿದ್ದಾರೆ. ಪ್ರತಿ ತಿಂಗಳು ಭಾರೀ ಪ್ರಮಾಣದ ಆದಾಯವಿದೆ. ವಿಚ್ಛೇದನ ಪಡೆದುಕೊಂಡ ಬಳಿಕ ಬೆಂಗಳೂರಿನಲ್ಲಿ ಮಗನ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ.

ನನಗೆ ಯಾವುದೇ ಉದ್ಯೋಗವಿಲ್ಲದೆ  ಆದಾಯ ಮೂಲವಿಲ್ಲ. ಹೀಗಾಗಿ ಮನೆ ಬಾಡಿಗೆ, ಮಗನ ತಿಂಗಳ ಶಾಲಾ ಶುಲ್ಕ, ದಿನಸಿ ಖರ್ಚು, ವೈದ್ಯಕೀಯ ಬಿಲ್‌, ವಾಹನಗಳ ಪೆಟ್ರೋಲ್‌ ಖರ್ಚು, ಇನ್ನಿತರೆ  ಖರ್ಚು ಸೇರಿ 1.08 ಲಕ್ಷ ರೂ.ಗಳ ಅಗತ್ಯವಿದೆ ಎಂದು ಅಫಿಡವಿಟ್‌ ( ಪ್ರಮಾಣಪತ್ರ) ಸಲ್ಲಿಸಿ, ಈ  ಮೊತ್ತವನ್ನು ವಿಚ್ಛೇದಿತ ಪತಿಯಿಂದ ಮಾಸಿಕ ಜೀವನಾಂಶವಾಗಿ ಕೊಡಿಸುವಂತೆ ಅರ್ಜಿಯಲ್ಲಿ ಕೋರಿದ್ದರು. 

ಪತಿಯ ವಾದವೇನು?
ಈಗಾಗಲೇ ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಮಾಸಿಕ  10.ಸಾವಿರ ರೂ ನೀಡುತ್ತಿದ್ದೇನೆ.ಅಲ್ಲದೆ 2015ರಿಂದ ಯಾವುದೇ ದುಡಿಮೆಯಿಲ್ಲ.ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇನೆ .ನನ್ನ ವೈದ್ಯಕೀಯ ವೆಚ್ಚಗಳನ್ನು ಭರಿಸುವುದೂ ಕಷ್ಟವಾಗುತ್ತಿದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡಿದ್ದರು.

ಮಹಿಳೆಯ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿದ್ದ ತಿಂಗಳ ವೆಚ್ಚದ ಪಟ್ಟಿ
-ಬಾಡಿಗೆ – 25,000
-ಮಗನ ಮಾಸಿಕ ಶಾಲಾ ಶುಲ್ಕ – 20,000 
-ವಿದ್ಯುತ್‌ ಬಿಲ್‌ – 1500 
-ನೀರಿನ ಬಳಕೆ ಹಾಗೂ ಮೇಂಟೈನೆಸ್‌ – 4000 
-ಕೇಬಲ್‌ ಟಿವಿ – 500
-ಫೋನ್‌ ಬಿಲ್‌ – 2000 
-ದಿನಸಿ – 12,000 
-ಪೆಟ್ರೋಲ್‌ ಬಿಲ್‌ – 7000
-ಇತರೆ ಖರ್ಚು – 20,000
-ತರಕಾರಿ ಹಾಗೂ ಹಾಲಿನ ಖರ್ಚು – 5000
-ವೈದ್ಯಕೀಯ ಬಿಲ್‌ – 9500
-ಮನೆಕೆಲಸದವರಿಗೆ – 1500
ಒಟ್ಟು – 1,08, 000.00 

Advertisement

Udayavani is now on Telegram. Click here to join our channel and stay updated with the latest news.

Next