Advertisement

ಮೃತ್ಯುಕೂಪಕ್ಕೆ ಮಹಿಳೆ ಬಲಿ

11:56 AM Oct 09, 2017 | |

ಬೆಂಗಳೂರು: ರಾಜಧಾನಿಯ ರಕ್ಕಸ ಗುಂಡಿಗಳಿಗೆ ಮತ್ತೂಂದು ಜೀವ ಬಲಿಯಾಗಿದೆ. ಬಿಎಂಆರ್‌ಸಿಎಲ್‌ನ ದಿವ್ಯ ನಿರ್ಲಕ್ಷ್ಯಕ್ಕೆ ಅಮಾಯಕ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. 

Advertisement

ಇತ್ತೀಚೆಗೆ ಮೈಸೂರು ರಸ್ತೆಯ ಮೇಲ್ಸೇತುವೆ ಮೇಲೆ ಹೋಗುವ ರಸ್ತೆಯಲ್ಲಿ ಗುಂಡಿ ಕಾರಣದಿಂದ ದಂಪತಿ ಜೀವ ಕಳೆದುಕೊಂಡಿರುವ ಘಟನೆ ಹಸಿರಾಗಿರುವಾಗಲೇ ಶನಿವಾರ ನಾಯಂಡಹಳ್ಳಿ ಜಂಕ್ಷನ್‌ ಬಳಿ ರಸ್ತೆ ಗುಂಡಿ ತಪ್ಪಿಸಲು ಪ್ರಯತ್ನಿಸಿದಾಗ ಹಿಂಬದಿ ಕುಳಿತಿದ್ದ ನಾಗವಾರದ ನಿವಾಸಿ ರಾಧಿಕಾ (47) ಕೆಳಗೆ ಬಿದ್ದಿದ್ದು, ಅದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ರಾಧಿಕಾ ಅವರ ಅಳಿಯ ಕಿರಣ್‌ಕುಮಾರ್‌ನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರಾಮನಗರದ ಆಸ್ಪತ್ರೆಯೊಂದಕ್ಕೆ ಹೋಗಲು ಅಳಿಯ ಕಿರಣ್‌ಕುಮಾರ್‌ ಜತೆ ರಾಧಿಕಾ ಪಂತರಪಾಳ್ಯ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು.

ಇದೇ ಮಾರ್ಗದಲ್ಲಿ ಬಿಎಂಆರ್‌ಸಿಎಲ್‌ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಈ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿ ಗುಂಡಿಮಯವಾಗಿದೆ. ಪಂತರಪಾಳ್ಯ ಬಳಿ ಹೋಗುತ್ತಿದ್ದಾಗ ಏಕಾಏಕಿ ರಸ್ತೆಗುಂಡಿ ಎದುರಾಗಿದ್ದು, ಅದನ್ನು ಕಂಡ ಕಿರಣ್‌ ವಾಹನದ ವೇಗ ಕಡಿಮೆ ಮಾಡಿದ್ದಾರೆ. ಅಷ್ಟರಲ್ಲಿ ಹಿಂಬಾಗದಲ್ಲಿ ಬರುತ್ತಿದ್ದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.  ಇದರಿಂದ ಕೆಳಗೆ ಬಿದ್ದ ರಾಧಿಕಾ ಅವರ ಮೇಲೆ ಲಾರಿಯ ಎಡಭಾಗದ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಲಾರಿ ಚಾಲಕ ರಮೇಶ್‌ ಎಂಬಾತನನ್ನು ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೃತ ರಾಧಿಕಾ ಅವರ ಪತಿ ಬಿಎಂಟಿಸಿಯಲ್ಲಿ ನೌಕರ ಎಂದು ತಿಳಿದುಬಂದಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ನೇತ್ರದಾನ: ರಾಧಿಕಾ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತೆಗೆ ಕೊಂಡೊಯ್ದ ವೇಳೆ ಅಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಇದರ ನಡುವೆಯೂ ರಾಧಿಕಾ ಕುಟುಂಬಸ್ಥರು ಆಕೆಯ ನೇತ್ರಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸ್ಥಳೀಯರ ಆಕ್ರೋಶ, ಪ್ರತಿಭಟನೆ: ಅಪಘಾತದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಬಿಬಿಎಂಪಿ ವಿರುದ್ಧ ಧಿಕ್ಕಾರ ಕೂಗಿ ರಸ್ತೆ ತಡೆ ನಡೆಸಿದರು. ಮೈಸೂರು ರಸ್ತೆಯ ಪಂತರಪಾಳ್ಯದಲ್ಲಿ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಹಾಳಾಗಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಧರಣಿ ಆರಂಭಿಸಿದರು. ಇದರಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗುಂಡಿ ಮುಚ್ಚದ ಬಿಎಂಆರ್‌ಸಿಎಲ್‌: ಈ ಮಾರ್ಗದಲ್ಲಿ ವಾಹನ ಸವಾರರು ನಿತ್ಯ ಪರದಾಡುವುದನ್ನು ಕಂಡ ಸಂಚಾರ ವಿಭಾಗದ ಪೊಲೀಸರು ಸ್ವಯಂಪ್ರೇರಿತವಾಗಿ ಬಿಬಿಎಂಪಿ ಅಧಿಕಾರಿಗಳ ಸಹಕಾರ ಪಡೆದು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೆ, ಒಂದು ಕಡೆ ಮುಚ್ಚಿಕೊಂಡು ಬರುತ್ತಿದ್ದರೆ ಮತ್ತೂಂದು ಕಡೆ ಭಾರೀ ಪ್ರಮಾಣದ ಮಳೆ ಪೊಲೀಸರ ಶ್ರಮವನ್ನು ಹಾಳುಮಾಡುತ್ತಿದೆ.

ಮೆಟ್ರೋ ಕಾಮಗಾರಿಗಾಗಿ ಈ ಭಾಗದ ರಸ್ತೆಯನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಅವರೇ ರಸ್ತೆಯ ಸಂಪೂರ್ಣ ನಿರ್ವಹಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚುವಂತೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಕರೋಲಾ ಅವರಿಗೆ ತಿಳಿಸಲಾಗಿತ್ತು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹೇಳಿದ್ದಾರೆ. ಆದರೂ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಅಗತ್ಯ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಆರೋಪಿಸಿದ್ದಾರೆ.

ಎಚ್ಚೆತ್ತುಕೊಳ್ಳದ  ಬಿಬಿಎಂಪಿ: ಕೆಲ ದಿನಗಳ ಹಿಂದೆ ರಸ್ತೆ ಗುಂಡಿಯಿಂದ ದಂಪತಿ ಮೃತಪಟ್ಟ ನಂತರವೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ ಅಧಿಕಾರಿಗಳು ಗುಂಡಿ ಮುಚ್ಚಲು ನಿರ್ಲಕ್ಷ್ಯ ಧೋರಣೆ ಅನುಸರಿಸಿದ ಪರಿಣಾಮ ನಗರದಲ್ಲಿ ಪದೇ ಪದೇ ಸಾವುನೋವುಗಳು ಸಂಭವಿಸುತ್ತಿವೆ. ನಗರದ ಒಂದಲ್ಲ ಒಂದು ಭಾಗದಲ್ಲಿ ಗುಂಡಿಯಿಂದ ರಸ್ತೆ ಅಪಘಾತಗಳು ವರದಿಯಾಗುತ್ತಿವೆ. ಗುಂಡಿಗಳನ್ನು ಕೂಡಲೇ ಮುಚ್ಚುವುದಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳುತ್ತಿದ್ದರಾದರೂ ಕಾಮಗಾರಿ ಮಾತ್ರ ಕೈಗೊಂಡಿಲ್ಲ. ಈ ಮಧ್ಯೆ ಮುಂದುವರಿದಿರುವ ಭಾರಿ ಪ್ರಮಾಣ ಮಳೆ ಪಾಲಿಕೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ.

ಐದು ಲಕ್ಷ ಪರಿಹಾರ: ಅಪಘಾತದ ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್‌ ಸಂಪತ್‌ರಾಜ್‌, ಮೃತ ರಾಧಿಕಾ ಕುಟುಂಬದವರಿಗೆ ಸಾಂತ್ವನ ಹೇಳಿದರು. ಜತೆಗೆ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ಈಗಾಗಲೇ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆ ನಿಂತ ಕೂಡಲೇ ನಗರದಲ್ಲಿನ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಇದರೊಂದಿಗೆ ತೇವಾಂಶದ ನಡುವೆಯೂ ರಸ್ತೆ ಗುಂಡಿ ಮುಚ್ಚುವ ತಂತ್ರಜ್ಞಾನವಿದೆಯೇ ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಕೋರಲಾಗಿದೆ ಎಂದರು.

ಸಾವಿನ ಬಳಿಕ “ಗುಂಡಿ’ ದುರಸ್ತಿ: ಭಾನುವಾರ ಬೆಳಗ್ಗೆ ಪಂತರಪಾಳ್ಯದಲ್ಲಿ ನಡೆದ ರಸ್ತೆ ಅಪಘಾತದ ಬಳಿಕ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಕೂಡಲೇ ಆರು ಲಾರಿ ವೆಟ್‌ಮಿಕ್ಸ್‌, ಒಂದು ಜೆಸಿಬಿ, ಒಂದು ರೋಲರ್‌ ಹಾಗೂ 50 ಮಂದಿ ಸಿಬ್ಬಂದಿ ಬಳಸಿ ನಾಯಂಡಹಳ್ಳಿ ಜಂಕ್ಷನ್‌ನಿಂದ ಆರ್‌.ಆರ್‌.ನಗರ ಕಮಾನುವರೆಗಿನ ರಸ್ತೆ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next