Advertisement

ಹೆಣ್ಮಕ್ಕಳು ಸುಶಿಕ್ಷಿತರಾದರೆ ಕುಟುಂಬ ಚಿತ್ರಣವೇ ಬದಲು

10:39 AM Apr 20, 2022 | Team Udayavani |

ಧಾರವಾಡ: ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಹೆಣ್ಣು ಮಕ್ಕಳು ಶಿಕ್ಷಿತರಾದರೆ ಇಡೀ ಕುಟುಂಬದ ಚಿತ್ರಣವೇ ಬದಲಾಗಲು ಸಾಧ್ಯ. ಶಿಕ್ಷಣದಿಂದ ನಮ್ಮ ಹಕ್ಕುಗಳಿಗೆ ಧ್ವನಿ ದೊರೆತು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬಹುದು. ವಯೋಮಿತಿ, ಲಿಂಗ ತಾರತಮ್ಯವಿಲ್ಲದೇ ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂದು ಜಿಪಂ ಸಿಇಒ ಡಾ| ಸುರೇಶ ಇಟ್ನಾಳ ಹೇಳಿದರು.

Advertisement

ಲೋಕ ಶಿಕ್ಷಣ ನಿರ್ದೇಶನಾಲಯ, ಜಿಪಂ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಕ್ಲಾಸಿಕ್‌ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಬೋಧಕರ ಪುನಶ್ಚೇತನ ತರಬೇತಿ ಶಿಬಿರ ಹಾಗೂ ಪಾಠೊಪಕರಣಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳ ಅವಧಿಯಲ್ಲಿ ದೇಶ ಶೇ.80 ಸಾಕ್ಷರವಾಗಿದೆ. ಸಂವಿಧಾನದ 21ನೇ ವಿಧಿಯನ್ವಯ ಉಚಿತ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಲ್ಲಿದೆ. ಡಾ| ಅಂಬೇಡ್ಕರ್‌ ಅವರ ಆಶಯದಂತೆ ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಕೆ ಮಾತ್ರವಲ್ಲ, ಅದು ನಮ್ಮನ್ನು ಜ್ಞಾನಸಂಪನ್ನರಾಗಿಸಿ ಹಕ್ಕುಗಳ ತಿಳಿವಳಿಕೆ ನೀಡುತ್ತದೆ ಎಂದರು.

ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಮಾತನಾಡಿ, ವಿದ್ಯೆಯು ಯಾರೂ ಕಸಿದುಕೊಳ್ಳಲಾಗದ ಸಂಪತ್ತು. ಅದನ್ನು ಪ್ರತಿಯೊಬ್ಬರೂ ತಮ್ಮದಾಗಿಸಿಕೊಳ್ಳಲು ಅಕ್ಷರಾಭ್ಯಾಸ ಮಾಡಬೇಕು. ಕಲಿಕೆಗೆ ವಯೋಮಿತಿ ನಿರ್ಬಂಧ ಇಲ್ಲ. ಪ್ರಜಾಪ್ರಭುತ್ವ ಯಶಸ್ವಿಗೆ ಅಕ್ಷರಸ್ಥರ ಪ್ರಮಾಣ ಅಧಿಕವಾಗಿರುವುದು ಮುಖ್ಯ. ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವುದು ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ಮೂಲ ಸಾಕ್ಷರತೆ ಹಾಗೂ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿರುವ 15 ವರ್ಷ ಮೇಲ್ಟಟ್ಟ ಜಿಲ್ಲೆಯ ಆಯ್ದ ಗ್ರಾಮಗಳ 5685 ಅನಕ್ಷರಸ್ಥರಿಗೆ ಪ್ರಸಕ್ತ ಸಾಲಿನಲ್ಲಿ ಸಾಕ್ಷರರನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ವಿದ್ಯೆಗೆ ಹೆಸರಾಗಿರುವ ಧಾರವಾಡ ಜಿಲ್ಲೆಯಲ್ಲಿ ಶೇ.80 ಸಾಕ್ಷರರಿದ್ದಾರೆ. ಉಳಿದ ಶೇ.20 ಜನರನ್ನೂ ಸಾಕ್ಷರರಾಗಿಸಲು ಪಣತೊಟ್ಟು ಕಾರ್ಯೋನ್ಮುಖರಾಗಿದ್ದೇವೆ ಎಂದರು.

Advertisement

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ದೇಶವೆಂದರೆ ಅಲ್ಲಿ ಬೆಟ್ಟ, ಗುಡ್ಡ, ಚಿನ್ನ, ಲೋಹದ ಗಣಿ ಸಂಪತ್ತು ಹೇರಳವಾಗಿದ್ದರೂ ಅದು ಬಲಿಷ್ಠ ರಾಷ್ಟ್ರವೆನಿಸಲಾರದು. ಸಾಕ್ಷರರು, ವಿಚಾರವಂತ ಪ್ರಜೆಗಳಿರುವ ರಾಷ್ಟ್ರ ಸದೃಢ ರಾಷ್ಟ್ರವೆನಿಸಿಕೊಳ್ಳುತ್ತದೆ ಎಂದು ಹೇಳಿದರು.

ವಯಸ್ಕರ ಶಿಕ್ಷಣದ ನೋಡಲ್‌ ಅಧಿಕಾರಿಗಳನ್ನು, ದಾನಿ ಬಸವರಾಜ ಕಣದಾಳಿ ಅವರನ್ನು ಸತ್ಕರಿಸಲಾಯಿತು.

ಡಯಟ್‌ ಪ್ರಾಚಾರ್ಯೆ ಜಯಶ್ರೀ ಕಾರೇಕಾರ್‌, ಕ್ಲಾಸಿಕ್‌ ಸಮೂಹ ಸಂಸ್ಥೆಗಳ ಸಂಗಮೇಶ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಉಮೇಶ ಬೊಮ್ಮಕ್ಕನವರ, ಅಶೋಕ ಸಿಂದಗಿ, ಉಮಾ ಬಸಾಪುರ, ಜಿ.ಎಸ್‌. ಮಠಪತಿ, ಬಸವರಾಜ ಮಾಯಾಚಾರ್ಯ, ಶಿಕ್ಷಣ ಉಪಸಮನ್ವಯಾಧಿಕಾರಿ ಎಸ್‌.ಎಂ. ಹುಡೇದಮನಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಹಾಯಕ ಶ್ರೀಶೈಲ ರಾಚಣ್ಣವರ ಮತ್ತಿತರರಿದ್ದರು.

ಎಸ್‌.ಸಿ. ಶಾನವಾಡ ನಿರೂಪಿಸಿದರು. ಡಾ| ರಾಮು ಮೂಲಗಿ ಸಾಕ್ಷರತಾ ಗೀತೆಗಳನ್ನು ಪ್ರಸ್ತುತ ಪಡಿಸಿದರು. ನಾಗೇಶ ನಾಯಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next