ಭೋಪಾಲ್: 28 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಶಾದೋಲ್ ನಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಮನೆಯನ್ನು ಮಧ್ಯಪ್ರದೇಶ ಸರ್ಕಾರದ ಆದೇಶದಂತೆ ಬುಲ್ಡೋಜರ್ಸ್ ಮೂಲಕ ಕೆಡವಿ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದಂತೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯ ಮನೆಯನ್ನು ಮಂಗಳವಾರ (ಮಾರ್ಚ್ 21) ಧ್ವಂಸಗೊಳಿಸಲಾಗಿದೆ.
ಶನಿವಾರದಂದು ಮೂವರು ಆರೋಪಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಶಾದಾಬ್ ಉಸ್ಮಾನಿ ಹಾಗೂ ಆತನ ಇಬ್ಬರು ಗೆಳೆಯರಾದ ರಾಜೇಶ್ ಸಿಂಗ್ ಮತ್ತು ಸೋನು ಜಾರ್ಜ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಶಾದಾಬ್ ಉಸ್ಮಾನಿ ಕಳೆದ ಒಂದೂವರೆ ವರ್ಷದಿಂದ ಯುವತಿ ಜೊತೆ ಸಂಬಂಧ ಹೊಂದಿದ್ದ. ಶನಿವಾರ (ಮಾರ್ಚ್ 19) ಶಾದಾಬ್ ಯುವತಿಯನ್ನು ಶಾದೋಲ್ ನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಕ್ಷೀರ್ ಸಾಗರ್ ಪ್ರದೇಶಕ್ಕೆ ಕರೆದೊಯ್ದಿದ್ದ.
ಕ್ಷೀರ್ ಸಾಗರ್ ಪ್ರದೇಶಕ್ಕೆ ತಲುಪಿದ ನಂತರ ಉಸ್ಮಾನಿ ತನ್ನಿಬ್ಬರು ಗೆಳೆಯರನ್ನು ಸ್ಥಳಕ್ಕೆ ಕರೆಯಿಸಿ, ಮದ್ಯ ಸೇವಿಸಿದ್ದರು. ನಂತರ ಮೂವರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕ ಯುವತಿಗೆ ಬಲವಂತವಾಗಿ ವಿಷ ಕುಡಿಸಿದ್ದು, ಇದರ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ಐಎಎನ್ ಎಸ್ ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ನಂತರ ಆಕೆಗೆ ವಿಷವನ್ನು ಬಲವಂತವಾಗಿ ಕುಡಿಸಿದ ಪರಿಣಾಮ ಸಾವನ್ನಪ್ಪಿರುವುದಾಗಿ ತಿಳಿದು ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪೊಲೀಸರ ತಂಡ ಉಸ್ಮಾನಿ ವಾಸವಾಗಿದ್ದ ಶಾದೋಲ್ ಜಿಲ್ಲೆಯ ಜಾವಾರಾ ಪ್ರದೇಶದಲ್ಲಿನ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿರುವುದಾಗಿ ವರದಿ ವಿವರಿಸಿದೆ. ಇಂದು ಮುಖ್ಯ ಆರೋಪಿ ಶಾದಾಬ್ ಉಸ್ಮಾನಿ ಮನೆಯನ್ನು ಕೆಡವಲಾಗಿದೆ. ಆದರೆ ಉಳಿದ ಇಬ್ಬರು ಆರೋಪಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿ ಜಿಲ್ಲಾಧಿಕಾರಿ ವಂದನಾ ತಿಳಿಸಿದ್ದಾರೆ.