ಹೈದರಾಬಾದ್ : ನಾಲ್ಕು ತಿಂಗಳ ಹಿಂದೆ ನಾಲ್ವರಿಂದ ಗ್ಯಾಂಗ್ ರೇಪಿಗೆ ಗುರಿಯಾದಾಗಿನ ತನ್ನ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡದ್ದನ್ನು ಭಯ, ಆತಂಕದಿಂದ ಗಮನಿಸಿದ 28ರ ಹರೆಯದ ಮಹಿಳೆಯು ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಈಗ ದೂರು ನೀಡಿ ಎಫ್ಐಆರ್ ದಾಖಲಿಸಿರುವ ಘಟನೆ ವರದಿಯಾಗಿದೆ.
ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು.
“ನನಗೆ ಪರಿಚಿತನೇ ಇರುವ ರಾಜ್ ಕಿರಣ್ ಎಂಬಾತ ನನಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ನನ್ನನ್ನು ಗುಂಟೂರಿನಲ್ಲಿ ಕೋಣೆಯೊಂದಕ್ಕೆ ಕರೆದೊಯ್ದಿದ್ದ. ಅಲ್ಲಿ ನನಗೆ ಅಮಲು ಬೆರೆಸಿದ ಪೇಯವನ್ನು ಕುಡಿಯಲು ಕೊಟ್ಟ. ಅದನ್ನು ಸೇವಿಸಿದ ನಾನು ಪ್ರಜ್ಞಾಹೀನಳಾದೆ. ಎಚ್ಚರಗೊಂಡಾಗ ನಾನು ಕನಿಷ್ಠ ನಾಲ್ವರಿಂದ ಗ್ಯಾಂಗ್ ರೇಪಿಗೆ ಗುರಿಯಾಗಿದ್ದುದು ನನಗೆ ಗೊತ್ತಾಯಿತು. ಆದರೆ ಆ ಸಂದರ್ಭದಲ್ಲಿ ನಾನು ಮರ್ಯಾದೆಯ ಕಾರಣಕ್ಕೆ ಪೊಲೀಸರಿಗೆ ದೂರು ನೀಡಲು ಹಿಂಜರಿದೆ. ಈಗ ಇದ್ದಕ್ಕಿದ್ದಂತೆಯೇ ನಾನು ಅತ್ಯಾಚಾರಕ್ಕೆ ಗುರಿಯಾಗಿದ್ದಾಗಿನ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಆದ ಕಾರಣ ಈಗ ತಡವಾಗಿ ದೂರು ನೀಡುತ್ತಿದ್ದೇನೆ’ ಎಂದು ಮಹಿಳೆಯು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಹೇಳಿದ್ದಾಳೆ.
ಪಶ್ಚಿಮ ವಲಯದ ಡಿಸಿಪಿ ಎ ಆರ್ ಶ್ರೀನಿವಾಸ್ ಅವರು ಮಹಿಳೆಯ ದೂರಿನ ವಿವರಗಳನ್ನು ಮಾಧ್ಯಮಕ್ಕೆ ನೀಡಿದರು.
ಗ್ಯಾಂಗ್ ರೇಪ್ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಈ ಪ್ರಕರಣ ಗುಂಟೂರಿನಲ್ಲಿ ನಡೆದಿರುವ ಕಾರಣ ಕೇಸನ್ನು ಅಲ್ಲಿಗೆ ವರ್ಗಾಯಿಸುವರು ಎಂದು ಶ್ರೀನಿವಾಸ್ ಹೇಳಿದ್ದಾರೆ.
ಅತ್ಯಾಚಾರಕ್ಕೆ ಗುರಿಯಾದ ಮಹಿಳೆಗೂ ಮುಖ್ಯ ಆರೋಪಿ ರಾಜ್ ಕಿರಣ್ ಎಂಬಾತನಿಗೂ ಹಣಕಾಸಿನ ವಿವಾದ ಇದ್ದುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಶ್ರೀನಿವಾಸ್ ಹೇಳಿದರು.