Advertisement

ಹೋರಾಟದಿಂದ ಮಹಿಳೆ ದಾಸ್ಯ ಮುಕ್ತ

10:33 AM Aug 24, 2017 | |

ಕಲಬುರಗಿ: ಯಾವ ಪುರುಷ ಪ್ರಧಾನ ಸಮಾಜದ ಕೊಡುಗೆಯಾಗಿ ಮಹಿಳೆ ದಾಸ್ಯಕ್ಕೆ ಸಿಲುಕಿತ್ತೋ.. ಅದೇ ಕೆಲವು ಪುರುಷರ ಹೋರಾಟಗಳಿಂದಾಗಿ ಮಹಿಳೆ ದಾಸ್ಯದ ಸಂಕೋಲೆಯಿಂದ ಮುಕ್ತವಾಗಿದ್ದಾಳೆ ಎಂದು ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ ಅಭಿಪ್ರಾಯಪಟ್ಟರು. ಇಲ್ಲಿನ ಕನ್ನಡ ಭವನದಲ್ಲಿ ಅವಿರಳ ಜ್ಞಾನಿ ಹಡಪದ ಅಪ್ಪಣ್ಣ ಸೇವಾ ಟ್ರಸ್ಟ್‌ ಹಮ್ಮಿಕೊಂಡಿದ್ದ ಶಿವಶರಣೆ ಹಡಪದ
ಲಿಂಗಮ್ಮನವರ ಬದುಕು ಮತ್ತು ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಕ್ರಾಂತಿ ಪುರುಷ ಬಸವಣ್ಣ, ರಾಜಾರಾಮ್‌ಮೋಹನರಾಯ, ಈಶ್ವರಚಂದ್ರ ವಿದ್ಯಾಸಾಗರ ಇವರೆಲ್ಲ ಮಹಿಳೆಯರ ಕಲ್ಯಾಣ ಮತ್ತು ದಾಸ್ಯ ಮುಕ್ತಕ್ಕೆ ಹೋರಾಟ ಮಾಡಿದ್ದಾರೆ. ಅದರಿಂದಾಗಿ ಯಾವ ಪುರುಷರಿಂದ ದಾಸ್ಯ ಒದಗಿತ್ತೋ, ಅದೇ ದಾಸ್ಯ ಪುರುಷರಿಂದಲೇ ಹೋಗುವಂತಾಗಿದೆ. ಮಹಿಳಾ ಹೋರಾಟಗಾರರು, ಶರಣೆಯರು ಹಾಗೂ ಚಿಂತಕರ ಬಲದಿಂದ ಇವತ್ತು ಇಡೀ ಮಹಿಳಾ ಕುಲ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಲಗೊಂಡಿದೆ ಎಂದು ಹೇಳಿದರು. ಮಹಿಳಾ ಸಮಾನತೆ ಹೋರಾಟಗಳು, 12ನೇ ಶತಮಾನದಲ್ಲಿ ಮಹಿಳೆಗೆ ನೀಡಿದ
ಸ್ಥಾನಮಾನ, ಶರಣೆಯರು ಸಮಾಜಕ್ಕೆ ನೀಡಿದ ಕೊಡುಗೆಗಳ ಆಧಾರದಲ್ಲಿ ದಾಸ್ಯದ ಸಂಕೋಲೆ ಕ್ರಮೇಣ ಕಡಿಮೆಯಾಗಿ ಇವತ್ತು ಸಂಪೂರ್ಣವಾಗಿ ಪುರುಷರೊಟ್ಟಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾರೆ ಎಂದರು. ಹಡಪದ ಲಿಂಗಮ್ಮ ಅವರ ಬದುಕು ಮತ್ತು ಬರಹ ಕುರಿತು ಗುವಿವಿ ಪ್ರಾಧ್ಯಾಪಕಿ ಡಾ| ಜಯಶ್ರೀ ದಂಡೆ, 12ನೇ ಶತಮಾನದಲ್ಲಿ ಶರಣೆಯರ ಪಾತ್ರ ಕುರಿತು ಕನ್ನಡ ಪ್ರಾಧ್ಯಾಪಕಿ ಡಾ| ಸುನೀತಾ ಗುಮ್ಮಾ ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿದ್ದ ಹಡಪದ ಸಮಾಜದ ರಾಜ್ಯಾಧ್ಯಕ್ಷ ಅಣ್ಣಾರಾವ್‌ ನರಿಬೋಳ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣ- ಶರಣೆಯರಿಗೆ ಸ್ಥಾನ ಕಲ್ಪಿಸಿದ್ದರು. ಅವರಲ್ಲಿ ನಿಂಬೆಕ್ಕ, ಅಕ್ಕಮಹಾದೇವಿ ಮತ್ತು ಲಿಂಗಮ್ಮ ಹಡಪದ ಪ್ರಮುಖರು. ಸಮಾಜಕ್ಕೆ ಲಿಂಗಮ್ಮನವರ ಕೊಡುಗೆ ಆಪಾರ ಎಂದರು. ಸೇವಾಟ್ರಸ್ಟ್‌ ಅಧ್ಯಕ್ಷ ಎಸ್‌. ಕೆ.ತೆಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹಡಪದ ಸಣ್ಣೂರ, ಶಿವಶರಣಪ್ಪ ಹಡಪದ ಹಾಗರಗಿ ಇದ್ದರು. ಗುರು ಹಡಪದ ಖಣದಾಳ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next