ಜಬಲ್ಪುರ್(ಮಧ್ಯಪ್ರದೇಶ): ತನ್ನ ಒಂದೂವರೆ ವರ್ಷದ ಮಗುವನ್ನು ರಕ್ಷಿಸಲು ತಾಯಿ ಹುಲಿಯ ಜೊತೆ ಕಾದಾಡಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಬಾಂಧವ್ ಗಢ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ; ಮಮತಾ ಸರ್ಕಾರದ ಕಾನೂನು ಸಚಿವ ಘಟಕ್ ನಿವಾಸದ ಮೇಲೆ CBI ದಾಳಿ
ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ರೋಹಾನಿಯಾ ಗ್ರಾಮದಲ್ಲಿ ಹುಲಿ ದಾಳಿ ನಡೆಸಿದ ಪ್ರಕರಣ ನಡೆದಿತ್ತು. ಹುಲಿ ದಾಳಿಯಲ್ಲಿ ತಾಯಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ವಿವರಿಸಿದೆ.
ಪ್ರಕರಣದ ಬಗ್ಗೆ ಎಎನ್ ಐ ನ್ಯೂಸ್ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿರುವ ಬಾಂಧವ್ ಗಢ್ ಟೈಗರ್ ರಿಸರ್ವ್ ಮ್ಯಾನೇಜರ್ ಲವಿತ್ ಭಾರ್ತಿ, ಹುಲಿ ರಕ್ಷಿತಾರಣ್ಯದಿಂದ ಹೊರ ಪ್ರದೇಶದಲ್ಲಿ ತಿರುಗಾಡುತ್ತಿರುವುದಾಗಿ ಎಚ್ಚರಿಕೆ ನೀಡಿದ್ದೇವು. ಗ್ರಾಮಸ್ಥರು ಹುಲಿಯನ್ನು ನೋಡುವ ಕುತೂಹಲದಿಂದ ಹೊರ ಬರುತ್ತಿದ್ದರು. ಆದರೆ ಹುಲಿ ಇರುವಿಕೆ ಬಗ್ಗೆ ಮಹಿಳೆಗೆ ತಿಳಿದಿರಲಿಲ್ಲವಾಗಿತ್ತು. ತನ್ನ ತೋಟದಲ್ಲಿ ಮಗುವಿನ ಜೊತೆ ಮಹಿಳೆ ನಿಂತಿದ್ದ ವೇಳೆ ಹುಲಿ ದಾಳಿ ನಡೆಸಿತ್ತು.
ಕೂಡಲೇ ಮಗುವನ್ನು ತನ್ನ ತೋಳಿನಲ್ಲಿ ಹಿಡಿದುಕೊಂಡು ಹುಲಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ಹರಸಾಹಸ ಪಟ್ಟಿರುವುದಾಗಿ ವರದಿ ತಿಳಿಸಿದೆ. ಹುಲಿಯ ದಾಳಿಯಿಂದಾಗಿ ಮಗುವಿನ ತಲೆಗೆ ಗಾಯವಾಗಿದ್ದು, ಮಹಿಳೆಯ ದೇಹವೆಲ್ಲಾ ಗಾಯಗೊಂಡಿರುವುದಾಗಿ ಭಾರ್ತಿ ತಿಳಿಸಿದ್ದಾರೆ.
ಮಗುವನ್ನು ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಹುಲಿ ಜತೆ ಸೆಣಸಾಟ ನಡೆಸಿದ್ದ ಮಹಿಳೆ ಕೊನೆಗೆ ರಕ್ಷಣೆಗಾಗಿ ಕೂಗಿಕೊಂಡಾಗ ಗ್ರಾಮಸ್ಥರು ಗುಂಪುಗೂಡಿ ಹುಲಿಯನ್ನು ಓಡಿಸಿರುವುದಾಗಿ ವರದಿ ವಿವರಿಸಿದೆ.
ತಾಯಿ ಮತ್ತು ಮಗು ಜಬಲ್ಪುರ್ ಮೆಡಿಕಲ್ ಕಾಲೇಜ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯದಿಂದ ಇದ್ದಿರುವುದಾಗಿ ಪತಿ ಭೋಲಾ ಚೌಧರಿ ಎಎನ್ ಐಗೆ ತಿಳಿಸಿದ್ದಾರೆ.