Advertisement
ಏರ್ ಕೆನಡಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಬರೋಬ್ಬರಿ ಏಳು ಗಂಟೆ ಮೂತ್ರವಿಸರ್ಜನೆಗೆ ಅವಕಾಶ ನೀಡದೇ ಇದ್ದ ಕಾರಣ ಆ ಮಹಿಳಾ ಪ್ರಯಾಣಿಕರೊಬ್ಬರು ತನ್ನ ಸೀಟಿನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡು ವಿಮಾನ ಲ್ಯಾಂಡಿಂಗ್ ಆಗುವವರೆಗೆ ಅದರಲ್ಲೇ ಕುಳಿತಿದ್ದ ಅಮಾನವೀಯ ಘಟನೆಯೊಂದು ವರದಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
26 ವರ್ಷ ಪ್ರಾಯದ ಆ ಮಹಿಳೆ ಕೊಲಂಬಿಯಾದ ಬೊಗೋಟಾದಿಂದ ಐರ್ಲ್ಯಾಂಡ್ ನ ಡಬ್ಲಿನ್ ಗೆ ಪ್ರಯಾಣಿಸುತ್ತಿದ್ದರು. ಮತ್ತು ಈ ವಿಮಾನ ಹೊರಡುವುದು ಎರಡು ಗಂಟೆ ತಡವಾಗಿತ್ತು. ಮತ್ತು ವಿಮಾನ ಹೀಗೆ ನಿಂತಿದ್ದ ಸಮಯದಲ್ಲೇ ಈ ಮಹಿಳೆಗೆ ಮೂತ್ರಶಂಕೆಯಾಗಿ ಆಕೆ ವಿಮಾನದಲ್ಲಿದ್ದ ಟಾಯ್ಲೆಟ್ ಗೆ ಹೋಗಲು ಎದ್ದಿದ್ದಳು. ಆದರೆ ವಿಚಿತ್ರವೆಂಬಂತೆ ಗಗನ ಸಖಿ ಈಕೆಯನ್ನು ಟಾಯ್ಲೆಟ್ ಕಡೆ ಹೋಗದಂತೆ ತಡೆಯುತ್ತಾರೆ. ಆದರೆ ಈ ಮಹಿಳೆ ತನಗೆ ಎದುರಾಗಿದ್ದ ತುರ್ತು ಸ್ಥಿತಿಯನ್ನು ವಿವರಿಸಿದರೂ ಸಿಬ್ಬಂದಿ ಆಕೆಗೆ ಅವಕಾಶವನ್ನೇ ನೀಡುವುದಿಲ್ಲ. ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಎರಡು ಗಂಟೆಗಳಲ್ಲಿ ಕನಿಷ್ಟವೆಂದರೂ ಆಕೆ ನಾಲ್ಕು ಸಲ ವಿಮಾನ ಸಿಬ್ಬಂದಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಅವರ ಕಟು ವರ್ತನೆ ಮಹಿಳೆಗೆ ಅಚ್ಚರಿ ಮೂಡಿಸಿದೆ. ವಿಮಾನ ಸಿಬ್ಬಂದಿಯ ಗದರುವಿಕೆಗೆ ಕಂಗಾಲಾದ ಮಹಿಳೆ ತನ್ನ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ಆದರೆ ದುರದೃಷ್ಟವೆಂಬಂತೆ ಇದೇ ಸಂದರ್ಭದಲ್ಲಿ ಮಹಿಳೆಗೆ ಕುಳಿತ ಜಾಗದಲ್ಲೇ ಮೂತ್ರವಿಸರ್ಜನೆಯಾಗಿದೆ.
Related Articles
Advertisement
ಟೊರೆಂಟೋದಲ್ಲಿ ವಿಮಾನ ನಿಲ್ಲುತ್ತಿದ್ದಂತೆ ನಿಲ್ದಾಣದಲ್ಲೇ ಮಹಿಳೆ ರೂಂ ಒಂದನ್ನು ಬುಕ್ ಮಾಡಿ ಸ್ನಾನ ಮಾಡಿ ಶುಭ್ರವಾದ ಬಳಿಕವಷ್ಟೇ ಆಕೆ ನಿರಾಳವಾಗಿದ್ದು. ಈ ಎಲ್ಲಾ ವಿಚಾರವನ್ನು ಮಹಿಳೆ ಡಬ್ಲಿನ್ ಲೈವ್ ಗೆ ನೀಡಿರುವ ಸಂದರ್ಶನದಲ್ಲಿ ನೋವಿನಿಂದಲೇ ಹೇಳಿಕೊಂಡಿದ್ದಾರೆ. ಆ ಬಳಿಕ ಡಬ್ಲಿನ್ ತಲುಪವವರೆಗೂ ಏರ್ ಕೆನಡಾ ವಿಮಾನದ ಸಿಬ್ಬಂದಿ ಈಕೆಯನ್ನು ನಿರ್ಲಕ್ಷಿಸುತ್ತಿದ್ದ ವಿಚಾರ ಈ ಮಹಿಳೆಗೆ ಬಹಳಷ್ಟು ನೋವನ್ನುಂಟು ಮಾಡಿತ್ತು.
ಇನ್ನು ಡಬ್ಲಿನ್ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಈಕೆ ತನ್ನನ್ನು ಅವಮಾನಿಸಿದ ಸಿಬ್ಬಂದಿಯನ್ನು ಮಾತನಾಡಿಸಿ ತನಗಾದ ನೋವು ಮತ್ತು ಅವಮಾನವನ್ನು ಹೇಳಿಕೊಳ್ಳಬೇಕೆಂದು ಬಯಸಿದ್ದಾರೆ ಆದರೆ ವಿಚಿತ್ರವೆಂಬಂತೆ ಆ ಸಿಬ್ಬಂದಿ ವಿಮಾನದ ಹಿಂಭಾಗದಲ್ಲಿ ಹೇಡಿಯಂತೆ ಅಡಗಿಕೊಂಡಿದ್ದರು ಎಂಬ ವಿಚಿತ್ರ ಮಾಹಿತಿಯನ್ನೂ ಸಹ ಮಹಿಳೆ ತನ್ನ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಇದೀಗ ಮಹಿಳೆ ತಾನು ಪ್ರಯಾಣಿಸಿದ್ದ ವಿಮಾನ ಯಾನ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದು ಈ ಘಟನೆಯ ಕುರಿತಾಗಿ ದೂರನ್ನೂ ಸಹ ನೀಡಿರುವುದಾಗಿ ಆ ಮಹಿಳೆ ಹೇಳಿಕೊಂಡಿದ್ದಾರೆ.
ಆದರೆ ವಿಮಾನ ಸಿಬ್ಬಂದಿ ಈ ಮಹಿಳಾ ಪ್ರಯಾಣಿಕೆಯೊಂದಿಗೆ ಅಷ್ಟೊಂದು ನಿರ್ದಯವಾಗಿ ಮತ್ತು ನಿಷ್ಠುರವಾಗಿ ನಡೆದುಕೊಂಡಿದ್ದು ಮಾತ್ರ ಯಾಕೆ ಎಂಬುದು ಯಾರಿಗೂ ಅರ್ಥವಾಗದ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ.