Advertisement

ಮಹಿಳಾ ಸಬಲೀಕರಣಕ್ಕೆ ಪಣ

06:04 AM Jan 27, 2019 | Team Udayavani |

ಗದಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರಾಗಿಸಲು ಶ್ರಮಿಸುತ್ತಿರುವ ಡಾ| ವೀರೇಂದ್ರ ಹೆಗ್ಗಡೆ ಅವರು ನಾಡು ಕಂಡ ಮಹಾನ್‌ ಸಂತ. ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರನ್ನು ಸಿದ್ಧಗೊಳಿಸುತ್ತಿದೆ. ಮಹಿಳೆಯರು ಶೈಕ್ಷಣಿಕ, ಆರ್ಥಿಕತೆ ಜೊತೆಗೆ ರಾಜಕೀಯವಾಗಿ ಮುಂದೆ ಬರಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾಮಟ್ಟದ ಮಹಿಳಾ ಸಮಾವೇಶ ವ್ಯವಸ್ಥಾಪನಾ ಸಮಿತಿಯಿಂದ ನಗರದ ಹಾತಲಗೇರಿ ನಾಕಾದಲ್ಲಿರುವ ಉರ್ದು ಸ್ಕೂಲ್‌ ಆವರಣದಲ್ಲಿ ಶನಿವಾರ ಆರಂಭಗೊಂಡ ಜಿಲ್ಲಾಮಟ್ಟದ ಮಹಿಳಾ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಕೊಡುಗೆಯೂ ಅಪಾರ. ಈ ಭಾಗದ ಮಹಿಳೆಯರು ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಗುಂಪುಗಳ ಹೆಸರಲ್ಲಿ ಒಗ್ಗೂಡಿಕೊಂಡು ಆರ್ಥಿಕವಾಗಿ ಬಲಗೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದರೊಂದಿಗೆ ಮಹಿಳೆಯರು ತಯಾರಿಸುವ ಉತ್ತರ ಕರ್ನಾಟಕ ಖಾದ್ಯ ಪದಾರ್ಥಗಳಿಗೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ಗ್ರಾಮೀಣಾಭಿವೃದ್ಧಿಯಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ. ಮಹಾತ್ಮಗಾಂಧಿ ಅವರು ಕಂಡ ಗ್ರಾಮೀಣಾಭಿವೃದ್ಧಿ ಕನಸನ್ನು ಸಾಕಾರಗಳಿಸಲು ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ಸರಕಾರದ ಅನುದಾನವನ್ನು ಅವಲಂಬಿಸದೇ, ಸಂಘದ ಮಹಿಳೆಯರು ಸಂಘಟನೆ ಮೂಲಕ ಸ್ವಾವಲಂಬಿಗಳಾಗುತ್ತಿದ್ದಾರೆ. ಅದರಂತೆ ಶೇ. 60ರಷ್ಟು ಮಹಿಳೆಯರು ಗ್ರಾಮ ಸಭೆಯಲ್ಲಿ ಪಾಲ್ಗೊಂಡರೆ ಪ್ರಮುಖ ನಿರ್ಣಯ ಕೈಗೊಳ್ಳಬಹುದು ಎಂದು ಹೇಳಿದರು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್‌.ಎಚ್. ಮಂಜುನಾಥ ಮಾತನಾಡಿ, ದೇಶದ ಸ್ವಾಂತ್ರದ ನಂತರ ಮಹಿಳೆಯರ ಸಮಾನತೆ ಪ್ರಮುಖ ಘಟ್ಟವಾಗಿದೆ. ಈಗಲೂ ಅಸಮಾನತೆ ದೂರಾದರೆ ದೇಶದ ಅಭಿವೃದ್ಧಿ ಕಾಣಬಹುದು. ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಮಹಿಳೆಯರಿಗೆ ಯಾವುದೇ ಭದ್ರತೆ ತೆಗೆದುಕೊಳ್ಳದೆ ಸುಮಾರು 35 ಸಾವಿರ ಕೋಟಿ ರೂ.ಗಳ ಸಾಲವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ 500 ಕೋಟಿ ರೂ. ವ್ಯವಹಾರ ಮಾಡಲಾಗಿದೆ ಎಂದು ಹೇಳಿದರು.

ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ, ಸರಫರಾಜಅಹ್ಮದ್‌ ಉಮಚಗಿ, ಗಾಯಕಿ ಶೋಭಾ ಹುಯಿಲಗೋಳ, ಪ್ರಾದೇಶಿಕ ನಿರ್ದೇಶಕ ಪಿ. ಗಂಗಾಧರ ರೈ, ಶಿವಲೀಲಾ ಅಕ್ಕಿ ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ತೋಂಟದಾರ್ಯ ಮಠದ ಆವರಣದಿಂದ ಸಮಾರಂಭದ ವೇದಿಕೆವರೆಗೆ ಮಹಿಳೆಯರಿಂದ ಕುಭ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next