Advertisement

ವ್ಹೀಲ್‌ಚೇರಿಲ್ಲದೆ ನೆಲದ ಮೇಲೆಯೇ ಪತಿಯ ಎಳೆದೊಯ್ದ ಪತ್ನಿ 

03:45 AM Jun 03, 2017 | Team Udayavani |

ಶಿವಮೊಗ್ಗ: ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಯೋರ್ವರಿಗೆ ಎಕ್ಸ್‌ರೇ ತೆಗೆಸಲಿಕ್ಕಾಗಿ ಮೂರನೇ ಮಹಡಿಯಿಂದ ಮೊದಲ ಮಹಡಿಗೆ ಬರಲು ಆಸ್ಪತ್ರೆ ಸಿಬಂದಿ ಸ್ಟ್ರೆಚ್ಚರ್‌, ವ್ಹೀಲ್‌ಚೇರ್‌ ನೀಡದಿದ್ದುದರಿಂದ ಪತ್ನಿಯೇ ನೆಲೆದ ಮೇಲೆ ಎಳೆದೊಯ್ಯಬೇಕಾದ ಅಮಾನ ವೀಯ ಘಟನೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಶುಕ್ರವಾರ ಎಳೆದೊಯ್ಯುತ್ತಿರುವ ವೀಡಿಯೋ ಎಲ್ಲೆಡೆ ಹರಿದಾಡಿದೆ. ಎರಡು ದಿನ ಕಾದರೂ ಎಕ್ಸ್‌ರೇ ಮಾಡಿಸಲು ಸಿಬಂದಿ ಕರೆದೊಯ್ಯದ ಕಾರಣ ಅನಿವಾರ್ಯವಾಗಿ ರೋಗಿಯನ್ನು ಆತನ ಪತ್ನಿ ನೆಲದ ಮೇಲೆ ದರದರನೆ ಎಳೆದೊಯ್ದಿದ್ದಾರೆ. ಇದಕ್ಕೆ ಕಾರಣವಾದ ಸಿಬಂದಿಯ ಅಮಾನವೀಯ ನಡವಳಿಕೆ ಕುರಿತು ಈಗ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಟಿವಿ ಮಾಧ್ಯಮಗಳಲ್ಲಿ ಶುಕ್ರವಾರ ದಿನವಿಡೀ ಈ ವೀಡಿಯೋ ಬಿತ್ತರಗೊಂಡ ಬೆನ್ನಲ್ಲೇ  ಸ್ಟ್ರೆಚ್ಚರ್‌ ನೀಡದ ಸಿಬಂದಿಗಳ ಪೈಕಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.

ಸುದ್ದಿ ನೋಡಿ ಎಚ್ಚೆತ್ತುಕೊಂಡ ಆಡಳಿತ: ವೀಡಿಯೋ ವೈರಲ್‌ ಆಗಿ ಟೀಕೆಗಳು ಕೇಳಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ತತ್‌ಕ್ಷಣ ಆಸ್ಪತ್ರೆಗೆ ಧಾವಿಸಿ ರೋಗಿಯ ಆರೋಗ್ಯ ವಿಚಾರಿಸಿಕೊಂಡಿದೆ.

ರೋಗಿ ಯಾರು? ಎಲ್ಲಿಯವರು?: ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಅಮೀರ್‌ ಸಾಬ್‌ (72) ಗಂಟಲು ನೋವು ಹಾಗೂ ಎದೆ ನೋವು ಹಿನ್ನೆಲೆಯಲ್ಲಿ ಮೇ 25ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದೊಂದು ತಿಂಗಳಿಂದ ಇಲ್ಲಿನ ನ್ಯೂಮಂಡ್ಲಿಯಲ್ಲಿ ತನ್ನ ಮಗನ ಮನೆಯಲ್ಲಿ ವಾಸಿಸುತ್ತಿದ್ದರು. ಬಳಿಕ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆ ಮುಂದು ವರಿದಿತ್ತು. ಮೇ 31ರಂದು ಎಕ್ಸ್‌ ರೇ ಮಾಡಿಸುವಂತೆ ವೈದ್ಯರು ರೋಗಿಯ ಪತ್ನಿ ಫಾಮಿದಾಗೆ ತಿಳಿಸಿ ದ್ದರು.  ಅದರಂತೆ ರೋಗಿಯನ್ನು ಎಕ್ಸ್‌ರೇಗೆ ಕರೆದು ಕೊಂಡು ಹೋಗುವಂತೆ ಆಸ್ಪತ್ರೆಯ ಸಿಬಂದಿ ಬಳಿ ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಸಹಕರಿಸಿರಲಿಲ್ಲ. ಸ್ಟ್ರೆಚರ್‌, ವ್ಹೀಲ್‌ಚೇರ್‌ ಸಹ ಒದಗಿಸಿಲ್ಲ  ಎನ್ನುವುದು ರೋಗಿ ಕಡೆಯವರ ಆರೋಪ.

ಇದೇ ಸ್ಥಿತಿ 2 ದಿನ ಪುನರಾವರ್ತನೆಯಾಗಿದ್ದು, ಸಂಜೆ ರೌಂಡ್ಸ್‌ಗೆ ಬಂದ ವೈದ್ಯರು;  ಏಕೆ ಎಕ್ಸ್‌ ರೇ ಮಾಡಿಸಿಲ್ಲ ಎಂದು ಜೋರಾಗಿ ಕೇಳುತ್ತಿದ್ದರು. 

Advertisement

ಹೀಗಾಗಿ ಫಾಮಿದಾ ಅನಿವಾರ್ಯವಾಗಿ ತನ್ನ ಗಂಡನನ್ನು ನೆಲದ ಮೇಲೆ ಮಲಗಿಸಿ ಎರಡು ಕಾಲುಗಳನ್ನು ಹಿಡಿದುಕೊಂಡು 
ಎಕ್ಸ್‌ರೇ ಕೊಠಡಿಯತ್ತ ಎಳೆದೊಯ್ದಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿಯೋರ್ವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಅನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮೊಬೈಲ್‌ನಲ್ಲಿ ವ್ಯಕ್ತಿಯೊಬ್ಬರು ಘಟನೆಯನ್ನು ಚಿತ್ರೀಕರಿಸುತ್ತಿರುವುದು ಗೊತ್ತಾಗುವ ತ್ತಿದ್ದಂತೆ ಜಾಗೃತರಾದ ಆಸ್ಪತ್ರೆ ಸಿಬಂದಿ ತತ್‌ಕ್ಷಣವೇ ವ್ಹೀಲ್‌ಚೇರ್‌ ಒದಗಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಿಬಂದಿ ಅಮಾನತು: ಘಟನೆ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಆಸ್ಪತ್ರೆಯ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ದಾದಿಯರಾದ ಚೈತ್ರಾ, ಜ್ಯೋತಿ, ಆಶಾ ಮತ್ತು “ಡಿ’ ಗ್ರೂಪ್‌ ನೌಕರರಾದ ಸುವರ್ಣಮ್ಮ ಅವರನ್ನು ಸಿಮ್ಸ್‌ ನಿರ್ದೇಶಕ ಸುಶೀಲ್‌ಕುಮಾರ್‌ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಾನವ ಹಕ್ಕು ಆಯೋಗದಿಂದ ದೂರು ದಾಖಲು: ಎಕ್ಸ್‌ರೇ ಕೊಠಡಿಗೆ ತೆರಳಲು ಸ್ಟ್ರೆಚರ್‌ ಒದಗಿಸದ ಶಿವಮೊಗ್ಗದ ಸರಕಾರಿ ಮೆಗ್ಗಾನ್‌ ಆಸ್ಪತ್ರೆ ಪ್ರಕರಣದ ಬಗ್ಗೆ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಇದೊಂದು ಅಮಾನವೀಯ ಘಟನೆ ಎಂದು ಪರಿಗಣಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೆನಾ ಅವರು, ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ .

ಪೂರ್ವ ನಿಯೋಜಿತ ಕೃತ್ಯವೇ?
ಈ ಘಟನೆ ಕುರಿತು ಹಲವು ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ.ರೋಗಿಯನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲು ಆಸ್ಪತ್ರೆ ಸಿಬಂದಿ  ಸಹಕರಿಸಲಿಲ್ಲ. ಜತೆಗೆ ಸ್ಟ್ರೆಚರ್‌, ವ್ಹೀಲ್‌ಚೇರ್‌ ಕೊಡಲಿಲ್ಲ ಎಂಬ ದೂರು ಇದೆಯಾದರೂ ದೃಶ್ಯ ಚಿತ್ರೀಕರಿಸುತ್ತಿರುವವರು ಸಾಕು ಸಾಕು ಎಂದಾಗ ಮೊಬೈಲ್‌ ಕೆಮರಾ ನೋಡುತ್ತಾ ರೋಗಿಯನ್ನು ಎಳೆದುಕೊಂಡು ಹೋಗುತ್ತಿರುವ ಮಹಿಳೆಯೂ ಸಾಕೇ ಎಂದು ಕೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಪೂರ್ಣ ತನಿಖೆಯಿಂದಷ್ಟೇ ಸತ್ಯಾಂಶ ಏನೆಂಬುದು ಬೆಳಕಿಗೆ ಬರಬೇಕಿದೆ.

ಈ ಘಟನೆ ಬಗ್ಗೆ ಬೇಷರತ್‌ ಕ್ಷಮೆ ಕೇಳುತ್ತೇನೆ. ಇದೊಂದು ಅತ್ಯಂತ ಅಮಾನವೀಯ ಹಾಗೂ ತಲೆ ತಗ್ಗಿಸುವ ಸಂಗತಿ. ಸರಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ  ವಿಶ್ವಾಸ ಮೂಡಿಸಲು ಸರಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ, ಕೆಲವೊಂದು ಅವಿವೇಕಿಗಳಿಂದಾಗಿ ಸರಕಾರದ ಪ್ರಯತ್ನಗಳು ಭಸ್ಮ ಆಗುತ್ತವೆ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ
– ಕೆ.ಆರ್‌. ರಮೇಶ್‌ಕುಮಾರ್‌, 
ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next