Advertisement

Karkala ನೀರಿನ ಟ್ಯಾಂಕ್‌ ಕುಸಿದು ಮಹಿಳೆ ಸಾವು

01:13 AM Feb 01, 2024 | Team Udayavani |

ಕಾರ್ಕಳ: ದೇವಸ್ಥಾನದ ವಾರ್ಷಿಕ ಮಹಾಪೂಜೆ ವೇಳೆ ನೀರಿನ ಟ್ಯಾಂಕ್‌ ಕುಸಿದು ಬಿದ್ದು ಮಹಿಳೆ ಮೃತಪಟ್ಟು, ಯುವತಿ ಗಾಯಗೊಂಡ ಘಟನೆ ನಂದಳಿಕೆ ಗ್ರಾಮದ ಮಾವಿಕನಟ್ಟೆ ಎಂಬಲ್ಲಿ ಜ. 30ರಂದು ರಾತ್ರಿ ನಡೆದಿದೆ.

Advertisement

ಮಾವಿನಕಟ್ಟೆ ನಿವಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಲತಾ ಮೊಯ್ಲಿ (50) ಮೃತರು. ತಾಯಿ ಮತ್ತು ಮಗಳು ಇಬ್ಬರು ಊರಿನ ದೇವಸ್ಥಾನದಲ್ಲಿ ನಡೆದ ವರ್ಷಾವಧಿ ಮಾರಿಪೂಜೆಗೆ ತೆರಳಿದ್ದರು. ರಾತ್ರಿ ಅನ್ನಪ್ರಸಾದ ಸ್ವೀಕರಿಸಿ, ನಳ್ಳಿ ನೀರಿನ ಬಳಿಗೆ ತೆರಳಿ ಕೈ ತೊಳೆದು ಬಟ್ಟಲು ಇಡಲೆಂದು ತೆರಳಿದ್ದ ವೇಳೆ ದೇವಸ್ಥಾನದ ಪಕ್ಕದಲ್ಲಿದ್ದ ಸಿಮೆಂಟ್‌ನ ನೀರಿನ ಟ್ಯಾಂಕ್‌ ಆಕಸ್ಮಿಕವಾಗಿ ಕುಸಿದು ಅವರ ಮೈಮೇಲೆ ಬಿದ್ದಿದೆ.

ಗಂರ್ಭಿಣಿ ಪುತ್ರಿಗೆ ಗಾಯ
ಮಹಿಳೆ ಜತೆ ಪುತ್ರಿ ಗರ್ಭಿಣಿ ಪೂಜಾ ಕೂಡ ಇದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡರು. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟರು. ಪುತ್ರಿ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯರಲ್ಲಿ ಆತಂಕ
ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿ ಪಕ್ಕದ ಮಾವಿನಕಟ್ಟೆಯಲ್ಲಿ ದೇವಸ್ಥಾನವಿದೆ. ಇದೇ ಪರಿಸರದ ಮಾವಿಕನಟ್ಟೆ ಆಸುಪಾಸಿನಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಹೆದ್ದಾರಿ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದಕ್ಕೂ ಮೊದಲು ಈ ಪರಿಸರದಲ್ಲಿ ಅಪಘಾತಗಳು ಸಂಭವಿಸಿ ಜೀವಹಾನಿ ಆಗಿತ್ತು. ಇದೀಗ ದೇವಸ್ಥಾನದ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲೂ ದುರ್ಘ‌ಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ತಪ್ಪಿದ ಇನ್ನಷ್ಟು ಜೀವಹಾನಿ
ದೇವಸ್ಥಾನದ ಹಿಂಭಾಗದಲ್ಲಿ ಕಾಂಕೀಟ್‌ ನೀರಿನ ಹಳೆಯ ಟ್ಯಾಂಕ್‌ ಇದ್ದು, ಮಾರಿಪೂಜೆಯ ಸಂದರ್ಭ ಬಳಕೆಗೆಂದು ಟ್ಯಾಂಕ್‌ ಪೂರ್ತಿ ನೀರು ತುಂಬಿಸಲಾಗಿತ್ತು. ಟ್ಯಾಂಕ್‌ ಹಳೆಯದಾಗಿದ್ದ ಕಾರಣ, ನೀರಿನ ಒತ್ತಡ ಅಥವಾ ಇನ್ಯಾವುದೋ ಕಾರಣಕ್ಕೆ ಕುಸಿದು ಬಿದ್ದಿರುವ ಸಾಧ್ಯತೆಯಿದೆ. ದೇವಸ್ಥಾನಕ್ಕೆ ಮಾರಿಪೂಜೆಗೆಂದು ಆಗಮಿಸಿದ್ದ ಭಕ್ತರು ಅನ್ನಪ್ರಸಾದ ಸೇವಿಸಿ ಕೈ ತೊಳೆಯಲೆಂದು ಟ್ಯಾಂಕ್‌ ಇದ್ದ ಕಡೆ ತೆರಳುವವರಿದ್ದರು. ದುರಾದೃಷ್ಟವಶಾತ್‌ ತಾಯಿ-ಮಗಳು ಇದ್ದ ಸಂದರ್ಭ ಈ ದುರ್ಘ‌ಟನೆ ಸಂಭವಿಸಿದ್ದು, ಕೈ ತೊಳೆಯುವಲ್ಲಿ ಇನ್ನಷ್ಟು ಮಂದಿ ಭಕ್ತರು ಇದ್ದಿದ್ದರೆ ಹೆಚ್ಚಿನ ಪ್ರಾಣಹಾನಿಯಾಗುವ ಸಂಭವವಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next