ಪಿತ್ತೋರ್‌ಗಢ: ಗುಜರಾತ್‌ನ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಲು ಹೊರಟಿರುವ ವಿಚಾರ ಸುದ್ದಿಯಾದ ಬೆನ್ನಲ್ಲೇ ಇದೀಗ ದೇವ ಶಿವನನ್ನೇ ಮದುವೆಯಾಗುತ್ತೇನೆ ಎನ್ನುತ್ತಿರುವ ಇನ್ನೋರ್ವ ಯುವತಿಯ ಸುದ್ದಿ ಹೊರಬಿದ್ದಿದೆ.
ಈಕೆಯ ಹೆಸರು, ಹರ್ಮಿಂದರ್ ಕೌರ್. ಉತ್ತರ ಪ್ರದೇಶದ ಲಕ್ನೋ ಅಲಿಗಂಜ್ ಪ್ರಾಂತ್ಯದವಳು. ಈಕೆ ಉತ್ತರಾಖಂಡದ ಪಿಥೋರ್‌ಗಢ ಜಿಲ್ಲೆಯಲ್ಲಿರುವ, ಕೈಲಾಸ ಮಾನಸ ಸರೋವರಕ್ಕೆ ಹೋಗುವ ಮಾರ್ಗದಲ್ಲಿನ ಗಂಜಿ ಗ್ರಾಮಕ್ಕೆ ತನ್ನ ತಾಯಿಯೊಂದಿಗೆ ಇತ್ತೀಚೆಗೆ ಆಗಮಿಸಿದ್ದಳು.
ಇಲ್ಲಿ ಎಲ್ಲರಿಗೂ ಬೇಕೆಂದಾಗ ಆಗಮಿಸಲು ಅವಕಾಶವಿಲ್ಲ. ಹಾಗಾಗಿ, ಜಿಲ್ಲಾಡಳಿತದಿಂದ ಅನುಮತಿ ಪಡೆದು ಈಕೆ ಗಂಜಿ ಗ್ರಾಮಕ್ಕೆ 15 ದಿನಗಳ ಮಟ್ಟಿಗೆ ತೆರಳಿದ್ದಳು. ಅಲ್ಲಿಂದ ನೇರವಾಗಿ ಭಾರತ-ನೇಪಾಳ ಗಡಿಯಲ್ಲಿರುವ ನಿಷೇಧಿತ ಸ್ಥಳವಾದ ನಾಭಿಧಂಗ್‌ಗೆ ಹೋಗಿದ್ದಾಳೆ. ಅವಳಿಗೆ ನೀಡಲಾಗಿದ್ದ ಅನುಮತಿ ಮೇ 25ರಂದೇ ಕೊನೆಯಾಗಿದೆಯಾದರೂ ಆಕೆ ಅಲ್ಲಿಂದ ಮರಳಿಲ್ಲ.
ಹಾಗಾಗಿ, ಆಕೆಯನ್ನು ಅಲ್ಲಿಂದ ಕರೆತರಲೆಂದು ಪೊಲೀಸರ ತಂಡ ಹೋದಾಗ ಆಕೆ, ತಾನು ಪಾರ್ವತಿಯ ಅವತಾರವೆಂದೂ ಹಾಗೂ ಕೈಲಾಸ ಪರ್ವತದಲ್ಲಿರುವ ಶಿವನನ್ನು ವರಿಸುವುದಾಗಿ ತಿಳಿಸಿದ್ದಾಳೆ. ಕರೆದೊಯ್ಯಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ಬೆದರಿಸಿದ್ದಾಳೆ.
ಸದ್ಯಕ್ಕೆ ಪೊಲೀಸರ ತಂಡ ವಾಪಸು ಬಂದಿದ್ದು, ಸದ್ಯದಲ್ಲೇ 12 ಸಿಬ್ಬಂದಿಯಿರುವ ದೊಡ್ಡ ತಂಡವನ್ನು ಕಳುಹಿಸಿ ಆಕೆಯನ್ನು ವಾಪಸು ಕರೆತರುವುದಾಗಿ ಪೊಲೀಸರು ತಿಳಿಸಿದ್ದಾರೆ.