ಹೊಸದಿಲ್ಲಿ : ಸಿಬಿಎಸ್‌ಇ 10ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು ಇಂದು ಗುರುವಾರ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಇದರೊಂದಿಗೆ ಈ ಪ್ರಕರಣ ಸಂಪೂರ್ಣವಾಗಿ ಬಗೆಹರಿದಂತಾಗಿದೆ ಎಂದು ಡಿಸಿಪಿ ರಾಮ್‌ಗೋಪಾಲ್ ನಾಯ್ಕ ಹೇಳಿದ್ದಾರೆ.
ಈ ನಡುವೆ ಸಿಬಿಎಸ್‌ಇ 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆಯನ್ನು ಎಪ್ರಿಲ್ 25ರಂದು ನಡೆಸಲು ತೀರ್ಮಾನಿಸಿದೆ. 10ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ವ್ಯಾಪಕವಾಗಿ ಸೋರಿ ಹೋಗದಿದ್ದ ಕಾರಣ ಪುನರ್ ಪರೀಕ್ಷೆ ನಡೆಸದಿರಲು ಅದು ಈ ಮೊದಲೇ ತೀರ್ಮಾನಿಸಿತ್ತು.
ಕಳೆದ ವಾರ ಪೊಲೀಸರು ಸಿಬಿಎಸ್‌ಇ 12ನೇ ತರಗತಿ ಇಕಾನಮಿಕ್ಸ್ ಪೇಪರ್ ಲೀಕ್ ಆದುದಕ್ಕೆ ಸಂಬಂಧಿಸಿ ಓರ್ವ ಶಿಕ್ಷಕ ಸಹಿತ ಮೂವರನ್ನು ಬಂಧಿಸಿದ್ದರು. ಒಬ್ಬ ಶಿಕ್ಷಕ, ಒಬ್ಬ ಕ್ಲರ್ಕ್ ಮತ್ತು ಒಬ್ಬ ಸಹಾಯಕ ಸಿಬಂದಿಯ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಕೊನೆಗೂ ಅವರನ್ನು ಬಂಧಿಸಿದ್ದರು.
ಕಳೆದ ಮಾರ್ಚ್ 26 ಮತ್ತು 28ರಂದು ಅನುಕ್ರಮವಾಗಿ ಸಿಬಿಎಸ್‌ಇ 12ನೇ ತರಗತಿ ಅರ್ಥಶಾಸ್ತ್ರ ಮತ್ತು 10ನೇ ತರಗತಿ ಗಣಿತ ಪರೀಕ್ಷೆ ನಡೆದಿತ್ತು.