ಬೆಂಗಳೂರು: ಮನೆ ಮುಂದೆ ನಿಂತಿದ್ದ ಮಹಿಳೆಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಮೆಕ್ಯಾನಿಕ್‌ವೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಕೆರೆ ನಿವಾಸಿ ಪರ್ವೇಜ್ ಬಂಧಿತನಾಗಿದ್ದು, 4 ದಿನಗಳ ಹಿಂದೆ ಸ್ಯಾಂಕಿಕೆರೆ ಸಮೀಪ ಈ ಕೃತ್ಯ ಎಸಗಿದ್ದ. ಬಳಿಕ ಆತ ಜಾಮೀನು ಪಡೆದು ಹೊರ ಬಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೆಕ್ಯಾನಿಕ್ ಹಾಗೂ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟಗಾರನಾಗಿರುವ ಪರ್ವೇಜ್, ಕೆಲಸದ ನಿಮಿತ್ತ ಜನವರಿ 5ರಂದು ಎಂ.ಎಸ್.ಆರ್. ನಗರಕ್ಕೆ ತೆರಳಿದ್ದ. ಅಲ್ಲಿಂದ ಕೆಲಸ ಮುಗಿಸಿ ಮರಳುತ್ತಿದ್ದಾಗ ಮಾರ್ಗ ಮಧ್ಯೆ ಸ್ಯಾಂಕಿ ಕೆರೆಯ ಮಯೂರಿ ಹೋಟೆಲ್ ಹತ್ತಿರ ಮನೆಯೊಂದರ ಮುಂದೆ ನಿಂತಿದ್ದ ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ಆತ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆದರೆ, ತಾನು ಮೂತ್ರ ವಿಸರ್ಜನೆಗೆ ಕತ್ತಲಿನಲ್ಲಿ ಮನೆ ಕಾಂಪೌಂಡ್ ಬಳಿಗೆ ಹೋಗಿದ್ದೆ. ಅದನ್ನೇ ಅವರು ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕೂಡಲೇ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.
ಕೂಡಲೇ ಹೊಯ್ಸಳ ವಾಹನದಲ್ಲಿ ತೆರಳಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯದಲ್ಲಿ ಕುಟುಂಬದವರು, ಆತ ಮಾನಸಿಕ ಅಸ್ವಸ್ಥನೆಂದು ವೈದ್ಯಕೀಯ ದಾಖಲೆ ಸಲ್ಲಿಸಿದ್ದರಿಂದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು ಎಂದು ಪೊಲೀಸರು ಹೇಳಿದ್ದಾರೆ.
ಮತ್ತೂಬ್ಬನಿಗೆ ಹಿಗ್ಗಾಮುಗ್ಗ ಏಟು: ಶಾಲೆ ಮುಗಿಸಿ ಮನೆ ಮರಳುವಾಗ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ವೈಯಾಲಿ ಕಾವಲ್ 13ನೇ ಅಡ್ಡರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದ ಕಿಡಿಗೇಡಿ, “ಯಾವುದೇ ಅಭ್ಯಂತರ ಇಲ್ಲವೆಂದರೆ, ನನ್ನನ್ನು ತಬ್ಬಿಕೊಳ್ಳುತ್ತೀಯಾ’ ಎಂದಿದ್ದಾನೆ. ಈ ಮಾತಿನಿಂದ ಆತಂಕಗೊಂಡ ವಿದ್ಯಾರ್ಥಿನಿ, ರಕ್ಷಣೆಗೆ ರಸ್ತೆ ಬದಿಯ ಮನೆಯೊಂದಕ್ಕೆ ಹೋಗಿದ್ದಾಳೆ. ಈ ಚೀರಾಟ ಕೇಳಿದ ಸ್ಥಳೀಯರು, ತಕ್ಷಣವೇ ಕಿಡಿಗೇಡಿಯನ್ನು ಹಿಡಿದು ಬಡಿದಿದ್ದಾರೆ. ಆ ವೇಳೆ ಜನರಿಂದ ಸಿನಿಮೀಯ ಶೈಲಿಯಲ್ಲಿ ಆತ ತಪ್ಪಿಕೊಂಡು ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ವೈಯಾಲಿಕಾವಲ್ ಠಾಣೆ ಪ್ರಕರಣ ದಾಖಲಾಗಿದೆ.