ಕೆ.ಆರ್.ಪುರ: ಸಹೋದರಿಯ ಮದುವೆಗೆ ಅಡ್ಡಿಯಾದ ಕಾರಣಕ್ಕೆ ಗೃಹಿಣಿ ಕೊಲೆಗೆ ಯತ್ನಿಸಿದ ಯುವಕ ಹಾಗೂ ಕೊಲೆಗೆ ಪ್ರೋತ್ಸಾಹ ನೀಡಿದ ವ್ಯಕ್ತಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಪೈ ಲೇಔಟ್ ನಿವಾಸಿ ಲುಮೀನಾ ರಾಣಿ ಹಲ್ಲೆಗೊಳಗಾದ ಗೃಹಿಣಿ. ಕೊಲೆಗೆ ಯತ್ನಿಸಿದ ರೋತ್‌ಕುಮಾರ್ ಮತ್ತು ಕೊಲ್ಲಲು ಸೂಚಿಸಿದ ಲುಮೀನಾರ ಪತಿ ಪ್ರೇಮ್ ಕುಮಾರ್ ಬಂಧಿತ ಆರೋಪಿಗಳು. ಟಿಸಿ ಪಾಳ್ಯದ ಬೆಥಾನಿಯಾ ಚರ್ಚ್ ಪಾಸ್ಟರ್ ಆಗಿದ್ದ ಪ್ರೇಮ್‌ಕುಮಾರ್ ಜತೆ 18 ವರ್ಷಗಳ ಹಿಂದೆ ಲುಮೀನಾರಾಣಿ ವಿವಾಹವಾಗಿದ್ದು, ದಂಪತಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಈ ನಡುವೆ ಕಿತ್ತಗ ನೂರು ಮೂಲದ ಮೋನಿಷಾ ಎಂಬ ಯುವತಿಯೊಂದಿಗೆ ಪ್ರೇಮ್‌ಕುಮಾರ್ ಅಕ್ರಮ ಸಂಬಂಧ ಹೊಂದಿದ್ದ.
ಇದೇ ವಿಷಯಕ್ಕೆ ಪ್ರೇಮ್ ಮತ್ತು ಲುಮೀನಾ ನಡುವೆ ವೈಮನಸ್ಸು ಉಂಟಾಗಿ, ವಿಚ್ಛೇದನ ಕೋರಿ ನ್ಯಾಯಲಯದ ಮೊರೆ ಹೋಗಿದ್ದರು. ಪ್ರಕರಣ ಕೌಟುಂಬಿಕ ನ್ಯಾಯಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಈ ಮಧ್ಯೆ ಮೋನಿಷಾಳ ಸೋದರ ರೋತ್‌ಕುಮಾರ್, ತನ್ನ ತಂಗಿಯನ್ನು ಮದುವೆಯಾಗುವಂತೆ ಪ್ರೇಮ್ ಮೇಲೆ ಒತ್ತಡ ಹೇರುತ್ತಿದ್ದ. “ಲುಮೀನಾ ಜೀವಂತ ಇರುವವರೆಗೆ ನಿನ್ನ ತಂಗಿಯನ್ನು ವಿವಾಹವಾಗಲು ಸಾಧ್ಯವಿಲ್ಲ. ಮೊದಲು ಆಕೆಯನ್ನು ಕೊಲೆ ಮಾಡು ನಂತರ ಮೋನಿಷಾಳನ್ನು ವಿವಾಹವಾಗುತ್ತೇನೆ,’ ಎಂದು ಪ್ರೇಮ್‌ಕುಮಾರ್ ಮಾತು ಕೊಟಿದ್ದ ಎನ್ನಲಾಗಿದೆ. ಈತನ ಮಾತು ನಂಬಿದ ರೋತ್, ಮಂಗಳವಾರ ರಾತ್ರಿ 10.45 ಸಮಯದಲ್ಲಿ ಪೈ ಲೇಔಟ್‌ನ ಸಾಯಿ ನಿಕೇತನ ಅಪಾರ್ಟ್‌ಮೆಂಟ್‌ನಲ್ಲಿರುವ ಸಂಬಂಧಿ ಮನೆಯಿಂದ ಮಗನನ್ನು ಕರೆದೊಯ್ಯುತ್ತಿದ್ದ ಲುಮೀನಾರ ತಲೆ ಮತ್ತು ಕೈಗೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಲುಮೀನಾರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಮಹದೇವಪುರ ಪೊಲೀಸರು, ಸಿಸಿಟಿ ದೃಶ್ಯಗಳ ಆಧರಿಸಿ ಅರೋಪಿಗಳಾದ ರೋತ್ ಮತ್ತು ಪ್ರೇಮ್‌ಕುಮಾರ್ ನನ್ನು ಬಂಧಿಸಿದ್ದಾರೆ.