ಚಾಮರಾಜನಗರ: ನಗರದ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ್ದ ಮಹಿಳೆಯನ್ನು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹುಣಸೂರಿನ ನಾಲ್‌ಬಾನ್ ಬೀದಿ ನಿವಾಸಿ ವಸಂತ ಅವರ ಪತ್ನಿ ರಂಜಿತಾ ಮಗು ಅಪರಹಣಕ್ಕೆ ಯತ್ನಿಸಿದ ಮಹಿಳೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊಳ್ಳೇಗಾಲ ತಾಲೂಕು ಪಾಳ್ಯದ ಮುತ್ತಮ್ಮಳಿಗೆ ಜೂ.13ರಂದು ಗಂಡು ಮಗು ಜನಿಸಿತ್ತು. ಬುಧವಾರ ಮಗುವಿಗೆ ಹುಷಾರಿಲ್ಲವೆಂದು ಅಜ್ಜಿ ಆಸ್ಪತ್ರೆಗೆ ತಂದಿದ್ದಾರೆ. ಅದೇ ವಾರ್ಡಿನಲ್ಲಿ ಓಡಾಡುತ್ತಿದ್ದ ರಂಜಿತಾ ಅಜ್ಜಿಯನ್ನು ಪರಿಚಯಿಸಿಕೊಂಡಿದ್ದಾಳೆ. ಕೆಲ ಸಮಯ ಮಗು ಎತ್ತಿಕೊಳ್ಳುವೆ, ನೀವು ವೈದ್ಯರಿದ್ದಾರೆಯೇ ಎಂದು ನೋಡಿಕೊಂಡು ಬನ್ನಿ ಎಂದು ಅಜ್ಜಿಗೆ ಹೇಳಿದ್ದಾಳೆ.
ಅಜ್ಜಿ ಇತ್ತ ಬರುತ್ತಿದ್ದಂತೆಯೇ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಅಜ್ಜಿ ವಾಪಸ್ ಬಂದು ನೋಡಿದಾಗ ಅಲ್ಲಿ ಆ ಮಹಿಳೆ ಇಲ್ಲದಿರುವುದು ಕಂಡು ಗಾಬರಿಯಾಗಿ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ನಾಗೇಗೌಡ ಮತ್ತು ಸಿಬ್ಬಂದಿ ಆಸ್ಪತ್ರೆ ಮುಂದೆ ಇರುವ ಆಟೋ ಚಾಲಕರನ್ನು ವಿಚಾರಿಸಿದ್ದಾರೆ.
ಆಟೋ ಚಾಲಕನೊಬ್ಬ ಮಗುವಿನೊಂದಿಗೆ ಬಂದ ಮಹಿಳೆಯನ್ನು ಹುಣಸೂರಿಗೆ ಹೋಗುವ ಬಸ್ ನಿಲ್ದಾಣದ ಬಳಿ ಬಿಟ್ಟಿದ್ದಾಗಿ ತಿಳಿಸಿದ್ದಾನೆ. ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋದಾಗ ಹುಣಸೂರಿನ ಬಸ್ ಹೋಗಿರುವ ವಿಷಯ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಹುಣಸೂರಿನ ಪೊಲೀಸರಿಗೆ ಚಾಮರಾಜನಗರದಿಂದ ಬರುವ ಬಸ್ ತಪಾಸಣೆ ಮಾಡುವಂತೆ ಸೂಚಿಸಿದ್ದಾರೆ.
ಹುಣಸೂರಲ್ಲಿ ಪೊಲೀಸರು ಮಗುವಿನೊಂದಿಗೆ ಇಳಿದ ಮಹಿಳೆಯನ್ನು ವಶಕ್ಕೆ ಪಡೆದು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದೇ ಮಗು ಎಂದು ದೃಢಪಟ್ಟಿದೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪಟ್ಟಣ ಠಾಣೆ ಇನ್‌ಪೆಕ್ಟರ್ ನಾಗೇಗೌಡ ತಿಳಿಸಿದರು.