Advertisement

ಮಹಿಳೆ, ಮಕ್ಕಳ ಕಾಣೆ ಪ್ರಕರಣ ಶೀಘ್ರ ಪತ್ತೆ ಹಚ್ಚಿ: ಡಿಸಿ

08:43 PM Jul 26, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮಹಿಳೆ, ಮಕ್ಕಳು ಕಾಣೆಯಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರ ಅವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಕಾರಣಗಳಿಂದ ಕಾಣೆಯಾಗುವ ಮಹಿಳೆಯರು,  ಮಕ್ಕಳನ್ನು ಶೀಘ್ರ ಪತ್ತೆ ಹಚ್ಚದಿದ್ದಲ್ಲಿ ಅವರು ಅಪಾಯಕಾರಿ ಸಮಸ್ಯೆಗೆ ಸಿಲುಕುವ ಸಾಧ್ಯತೆಗಳಿವೆ. ತನಿಖಾಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರನ್ನು ರಕ್ಷಿಸಬೇಕು. ಇಂತಹ ಪ್ರಕರಣಗಳ ಪತ್ತೆಗೆ ಹೆಚ್ಚಿನ ಪೊಲೀಸ್‌ ಸಿಬಂದಿಯನ್ನು ವಿಶೇಷ ಕರ್ತವ್ಯದಲ್ಲಿ ನಿಯೋಜಿಸುವಂತೆ ಸೂಚನೆ ನೀಡಿದರು.

ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳ ಕುರಿತಂತೆ ಗಮನಹರಿಸಬೇಕು. ಉಡುಪಿ ಸಾಂತ್ವನ ಕೇಂದ್ರ ಸ್ಥಗಿತಗೊಂಡಿದ್ದು ಉಡುಪಿಗೆ ಸಂಬಂಧಪಟ್ಟ ನೊಂದ ಮಹಿಳೆಯರು ಸಖೀ ಒನ್‌ಸ್ಟಾಫ್ ಕೇಂದ್ರದಲ್ಲಿ ಅಗತ್ಯ ನೆರವು ಪಡೆಯುವಂತೆ ತಿಳಿಸಿದರು.

ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ತೊಂದರೆಯಾಗದ ಬಗ್ಗೆ ಖಾಸಗಿ ಸೇರಿದಂತೆ ಎಲ್ಲ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚನೆಯಾಗಿರುವ ಬಗ್ಗೆ ಪರಿಶೀಲಿಸಿ, ನಿಯಮಿತವಾಗಿ ಸಮಿತಿಯ ಸಭೆ ನಡೆಸಿ ವರದಿ ಪಡೆಯಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದರು.

Advertisement

ಜಿಲ್ಲೆಯ ವಲಸೆ ಕಾರ್ಮಿಕರಲ್ಲಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆ ನಿಗಾ ವಹಿಸಿ ಅವರು ವಾಸಿಸುವ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲಾ ಮಕ್ಕಳು 10 ದಿನಗಳಿಗಿಂತ ಹೆಚ್ಚು ಗೈರು ಹಾಜರಾದಲ್ಲಿ ಅಂತಹ ಮಕ್ಕಳ ಮಾಹಿತಿಯನ್ನು ಶಾಲೆಗಳಿಂದ ಪಡೆದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಹಿಳೆಯರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

63ರಲ್ಲಿ  24 ಪ್ರಕರಣ ಇತ್ಯರ್ಥ :

ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿ 2021ರ ಜೂನ್‌ ಅಂತ್ಯದ ವರೆಗೆ ಬಾಕಿಯಿದ್ದ 63 ಪ್ರಕರಣಗಳಲ್ಲಿ 24 ಪ್ರಕರಣ ಇತ್ಯರ್ಥಗೊಂಡಿದ್ದು, 16 ಸಾಂತ್ವನ ಕೇಂದ್ರದಲ್ಲಿ, 23 ನ್ಯಾಯಾಲಯದಲ್ಲಿ ಬಾಕಿ ಇವೆ. ಕಾರ್ಕಳ  ಮಹಿಳಾ ಸಾಂತ್ವನ ಕೇಂದ್ರದಲ್ಲಿ 23 ಪ್ರಕರಣಗಳಲ್ಲಿ 13 ಪ್ರಕರಣ ಇತ್ಯರ್ಥಗೊಂಡಿದ್ದು, 10 ಸಾಂತ್ವನ ಕೇಂದ್ರದಲ್ಲಿ ಬಾಕಿಯಿದೆ. ವರದಕ್ಷಿಣೆ ನಿಷೇಧ ಕಾಯ್ದೆಯಡಿ ಡಿಸೆಂಬರ್‌ವರೆಗೆ ಬಾಕಿಯಿದ್ದ 47 ಪ್ರಕರಣಗಳಲ್ಲಿ 29 ಇತ್ಯರ್ಥಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next