ದಾಂತೇವಾಡ (ಛತ್ತೀಸ್ ಗಢ): ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಮೂವರು ನಕ್ಸಲರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂವರಲ್ಲಿ ಇಬ್ಬರು ನಕ್ಸಲರು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಪೊಲೀಸ್ ಪಡೆಗಳ ಮೆಲೆ ನಡೆದಿದ್ದ ದಾಳಿಯ ಮುಖ್ಯ ರೂವಾರಿಗಳಾಗಿದ್ದರು ಎನ್ನಲಾಗಿದೆ. ಈ ನಕ್ಸಲರ್ ತಲೆ ಮೇಲೆ ನಗದು ಬಹುಮಾನ ಘೋಷಿಸಲಾಗಿತ್ತು.
ಕೋಸಿ ಅಲಿಯಾಸ್ ಶಾಂತಿ ಎಂಬ ಮಹಿಳಾ ನಕ್ಸಲ್ ಸೇರಿದಂತೆ ಹದ್ಮಾ ಮದ್ಕಮ್ ಹಾಗೂ ದೇವಾ ಮದ್ಕಮ್ ಎಂಬವರೇ ಪೊಲೀಸರಿಗೆ ಸೆರೆಸಿಕ್ಕಿದ ನಕ್ಸಲ್ ಗಳಾಗಿದ್ದಾರೆ. ಎನ್ ಕೌಂಟರ್ ಬಳಿಕ ಸುಮಾರು 24 ನಕ್ಸಲರು ಮಿರ್ಚಿಪಾರಾ ಮತ್ತು ನಹಾಡಿ ಗ್ರಾಮಗಳ ನಡುವೆ ಇದ್ದ ದಟ್ಟ ಅಡವಿಯಿಂದ ಕೂಡಿದ ಬೆಟ್ಟಗಳಲ್ಲಿ ಅವಿತುಕೊಂಡಿದ್ದರು ಎಂದು ದಾಂತೇವಾಡದ ಎಸ್.ಪಿ. ಅಭಿಷೇಕ್ ಪಲ್ಲವ ಅವರು ಮಾಹಿತಿ ನೀಡಿದ್ದಾರೆ.
ಕಮಾಂಡರ್ ಗುಡಾಧುರ್ ನೇತೃತ್ವದ ತಂಡದಲ್ಲಿದ್ದ ಸುಮಾರು 24 ನಕ್ಸಲರು ದಟ್ಟ ಅಡವಿಯಲ್ಲಿ ಅವಿತುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದ ಬಳಿಕ ಜಿಲ್ಲಾ ಮೀಸಲು ದಳ, ಇದರ ಮಹಿಳಾ ವಿಭಾಗವಾಗಿರುವ ದಾಂತೇಶ್ವರಿ ಲಢಾಕೆ, ವಿಶೇಷ ಕಾರ್ಯಾಚರಣೆ ಪಡೆ, ಛತ್ತೀಸ್ ಗಢ ಸಶಸ್ತ್ರ ಪಡೆ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.
ಪೊಲೀಸ್ ಪಡೆಗಳು ಮತ್ತು ನಕ್ಸಲ್ ಪಡೆಗಳೊಂದಿಗೆ ಗುಂಡಿನ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲೇ ಮೂವರು ನಕ್ಸಲರನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದಾರೆ.
ಸ್ಥಳೀಯ ಗೆರಿಲ್ಲಾ ಪಡೆಯ ಉಪ ಕಮಾಂಡರ್ ಆಗಿರುವ ಹದ್ಮಾ ಮದ್ಕಮ್ ತಲೆಗೆ ಮೂರು ಲಕ್ಷ ರೂಪಾಯಿಗಳ ಬಹುಮಾನ ಘೋಷಣೆಯಾಗಿತ್ತು. ಇನ್ನು ಶಾಂತಿ ಸ್ಥಳಿಯ ನಕ್ಸಲ್ ಪಡೆಯ ಸದಸ್ಯೆಯಾಗಿದ್ದಳು ಮತ್ತು ಈಕೆಯ ತಲೆಗೆ ಒಂದು ಲಕ್ಷ ರೂಪಾಯಿಗಳ ಬಹುಮಾನ ಘೋಷಣೆಯಾಗಿತ್ತು. ಸೆರೆ ಸಿಕ್ಕ ಇನ್ನೋರ್ವ ನಕ್ಸಲ್ ವ್ಯಕ್ತಿ ಮಾವೋವಾದಿಗಳ ಸಂಘಟನೆಯಾಗಿರುವ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯ ಮುಖ್ಯಸ್ಥನಾಗಿದ್ದ ಮತ್ತು ಈತನ ತಲೆಯ ಮೇಲೆ ಎರಡು ಲಕ್ಷ ರೂಪಾಯಿಗಳ ಬಹುಮಾನ ಘೋಷಣೆಯಾಗಿತ್ತು.
ಬಂಧಿತರಿಂದ ಎಕೆ-47, ಎಸ್.ಎಲ್.ಆರ್. ಮತ್ತು ಇನ್ಸಾಸ್ ರೈಫಲ್ ಗಳು, ಐಇಡಿ ಸ್ಫೊಟಕ್ಕೆ ಬಳಸುವ ಸ್ವಿಚ್ ಗಳು, ನಕ್ಸಲ್ ಸಮವಸ್ತ್ರಗಳು, ಸಾಹಿತ್ಯಗಳು ಮತ್ತು ಡಿಟೋನೇಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.