ಚನ್ನಗಿರಿ: ಮಹಿಳೆಯರಿಗೂ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರವೇ ಸಮಾಜದ ಏಳಿಗೆ ಸಾಧ್ಯವೆಂದು ಉಪ ಸಹಾಯಕ ಕೃಷಿ ನಿರ್ದೇಶಕಿ ಹಂಸವೇಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಸೋಮಶೆಟ್ಟೆಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನವಿಕಾಸ ಕೇಂದ್ರ ಸಂಯುಕ್ತಶ್ರಾಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದಕಾಲದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳಿದ್ದವು. ಆದರೆ ಮಧ್ಯಕಾಲೀನ ಯುಗದಲ್ಲಿ ಮಹಿಳೆಯರನ್ನು ಅನುಚಿತವಾಗಿ ನಡೆಸಿಕೊಳ್ಳುವ ಪ್ರವೃತಿ ಬೆಳೆದು ಬಂತು ಎಂದು ವಿಷಾದಿಸಿದರು. ಹೆಣ್ಣನ್ನು ಭೋಗದ ವಸ್ತುವಿನ ರೂಪದಲ್ಲಿ ಕಾಣುವ ಕೆಟ್ಟ ಸಂಸ್ಕೃತಿಯನ್ನು ತೊಲಗಿಸಬೇಕು. ಅತ್ಯಾಚಾರ, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗೆ ಭದ್ರತೆಯನ್ನು ಕಲ್ಪಿಸಬೇಕು. ಸಮಾಜದಲ್ಲಿ ಮಹಿಳೆ ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶವನ್ನು ಕಲ್ಪಿಸಿಕೊಡಬೇಕು. ಮಹಿಳಾ ದೌರ್ಜನ್ಯ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದರು.
ಧರ್ಮಸ್ಥಳ ಯೋಜನೆ ತಾಲೂಕು ಯೋಜನಾಧಿಕಾರಿ ಮಾಲತಿ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳ ಕುರಿತು ಜಾಗೃತರಾಗಿರಬೇಕು. ಮನೆಯಲ್ಲಿ ಕೆಲಸ ಮಾಡವುದಷ್ಟೇ ಮಹಿಳೆಯರ ಕೆಲಸವಲ್ಲ ಎಂಬ ಅಲೋಚನಾ ಲಹರಿಯನ್ನು ಮಹಿಳೆ ಬೆಳೆಸಿಕೊಂಡಾಗ ಮಾತ್ರ ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕಲು ಸಾಧ್ಯವೆಂದರು.
ಮಹಿಳೆ ಇಂದು ಪೈಲಟ್‌ನಿಂದ ಹಿಡಿದು, ಸೈನ್ಯ, ಕ್ರೀಡೆ, ಸಾಹಿತ್ಯ, ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿರುವುದರಿಂದ ಮಹಿಳೆಯನ್ನು ಪುರುಷನ ಸಮಾನವಾಗಿ ಕಾಣಬೇಕೆಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್, ಕೃಷಿಕ ಮಹಿಳೆ ಪ್ರತಿಭಾ, ರಾಜಶೇಖರಪ್ಪ, ಸುಷ್ಮಾ ಇದ್ದರು.