ಆಗ್ರಾ: ಅಘಾತಕಾರಿ ವಿದ್ಯಮಾನವೊಂದರಲ್ಲಿ ಉತ್ತರಪ್ರದೇಶದ ಇಟಾದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ವಿವಾಹಿತೆಯ ಮೇಲೆ ನಿರಂತರವಾಗಿ ಗ್ಯಾಂಗ್‌ರೇಪ್ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಅವಘಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, 27 ರ ಹರೆಯದ ಮಹಿಳೆ ಪತಿಯೊಂದಿಗೆ ಠಾಣೆಗೆ ಬಂದು ಎಎಸ್‌ಪಿ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
ನನ್ನ ಗಂಡ ಹಣಕಾಸು ಸಮಸ್ಯೆ ಹಿನ್ನಲೆಯಲ್ಲಿ ದುಡಿಮೆಗಾಗಿ ದೆಹಲಿಗೆ ತೆರಳಿದ್ದರು. ಅವರು ಇಲ್ಲದ ವೇಳೆ ನಿರಂತರವಾಗಿ ಮನೆಗೆ ಬರುತ್ತಿದ್ದ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ಮಹಿಳೆ ದಾಖಲಿಸಿದ್ದಾರೆ.
ಪತಿ ಮನೆಗೆ ಮರಳಿದ ಬಳಿಕ ನಾನು ವಿಚಾರ ತಿಳಿಸಿದ್ದು, ಪೊಲೀಸರ ಹೇಯ ಕೃತ್ಯದಿಂದಾಗಿ ನಾನೀನ 3 ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.
ಈ ವಿಚಾರ ಯಾರಿಗಾದರೂ ತಿಳಿಸಿದ್ದಲ್ಲಿ ನಿನ್ನ ಗಂಡನನ್ನು ಹತ್ಯೆ ಮಾಡುತ್ತೇವೆ ಮತ್ತು ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.