ರಾಜ್‌ಕೋಟ್ : ‘ನಾನು ಪ್ರಜ್ಞಾಹೀನಳಾಗಿದ್ದಾಗ ನನ್ನ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾನೆ’ ಎಂದು ಆರೋಪಿಸಿ 23ರ ಹರೆಯದ ಮಹಿಳೆಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಮೂರು ವರ್ಷ ಪ್ರಾಯದ ಗಂಡು ಮಗುವಿನ ತಾಯಿಯಾಗಿರುವ ರುಬಿನಾ ಅಫ್ಜಲ್ ಲಖಾನಿ ಮೊನ್ನೆ ಗುರುವಾರ ಪತಿ ಅಫ್ಜಲ್ ಹುಸೇನ್ ವಿರುದ್ಧ ರಾಜ್‌ಕೋರ್ಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ.
‘ಹದಿನೆಂಟು ತಿಂಗಳ ಹಿಂದೆ ನನ್ನ ಪತಿ ನನ್ನನ್ನು ಹೊಡೆದು ಹಿಂಸಿಸಿ ಮನೆ ಬಿಟ್ಟು ಹೋಗುವಂತೆ ಮಾಡಿದ್ದಾನೆ’ ಎಂದು ರುಬಿನಾ ದೂರಿದ್ದಾಳೆ.
“ಅಫ್ಜಲ್ ಜತೆಗೆ ನನ್ನ ಮದುವೆ ಐದು ವರ್ಷಗಳ ಹಿಂದೆ ನಡೆದಿತ್ತು. ಮದುವೆಯಾದಂದಿನಿಂದಲೂ ನನಗೆ ಪತಿ, ಅತ್ತೆ ಮಾವ ಹಿಂಸೆ ಕೊಡುತ್ತಲೇ ಬಂದಿದ್ದಾರೆ. 18 ತಿಂಗಳ ಹಿಂದೆ ಒಂದು ದಿನ ನನಗೂ ಪತಿ ಅಫ್ಜಲ್ ಗೂ ಮಾತಿನ ಜಗಳ ನಡೆದಿದ್ದಾಗ ಆತ ನನ್ನನ್ನು ಹೊಡೆದು ಹಲ್ಲೆಗೈದು ಪ್ರಜ್ಞಾಹೀನಳನ್ನಾಗಿ ಮಾಡಿದ್ದಾಗ ಆತ ತ್ರಿವಳಿ ತಲಾಕ್ ಘೋಷಿಸಿದ್ದಾನೆ” ಎಂದು ರುಬಿನಾ ತನ್ನ ದೂರಿನಲ್ಲಿ ಹೇಳಿದ್ದಾಳೆ.
“ನನಗೆ ಪ್ರಜ್ಞೆ ಮರಳಿದ ಬಳಿಕ ನನ್ನ ಪತಿ ಅಫ್ಜಲ್ ನನಗೆ ತ್ರಿವಳಿ ಕೊಟ್ಟಿರುವುದಾಗಿಯೂ, ಆದ ಕಾರಣ ನಾನು ಮನೆ ಬಿಟ್ಟು ಹೋಗಬೇಕೆಂದೂ ನನಗೆ ಅತ್ತೆ, ಮಾವ ಹೇಳಿದರು. ನಾನು ಪ್ರಜ್ಞಾಹೀನಳಾಗಿದ್ದಾಗ ಪತಿ ನನಗೆ ತ್ರಿವಳಿ ತಲಾಕ್ ನೀಡುವಂತಿಲ್ಲ ಎಂದು ನಾನು ಅತ್ತೆ ಮಾವನಲ್ಲಿ ಎಷ್ಟೇ ಹೇಳಿದರೂ ಪ್ರಯೋಜನವಾಗಲಿಲ್ಲ; ನಾನು ಬಲವಂತದಿಂದ ಮನೆ ಬಿಡಬೇಕಾಯಿತು’ ಎಂದು ರುಬಿನಾ ಹೇಳಿದ್ದಾಳೆ.
ಅಲ್ಲಿಯ ಬಳಿಕ ರುಬಿನಾ ತನ್ನ ಪುತ್ರನೊಂದಿಗೆ ಮೋಚಿ ಬಜಾರ್‌ನಲ್ಲಿನ ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದಾಳೆ. ರುಬಿನಾಳ ಸಮುದಾಯ ನಾಯಕರು ಮತ್ತು ಕುಟುಂಬದವರು ಈ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಿದರಾದರೂ ಅದು ಸಫಲವಾಗಲಿಲ್ಲ.
ರುಬಿನಾ ತನ್ನ ಪತಿ ಅಫ್ಜಲ್ ವಿರುದ್ಧ ಮಾತ್ರವಲ್ಲದೆ ಆತನ ತಾಯಿ ರಶೀದಾ, ತಂದೆ ಹುಸೇನ್ ಜಮಾಲ್, ಸಹೋದರಿ ಸುಹಾನಾ ಅಕ್ರಮ್ ಖೊರಾನಿ ಮತ್ತು ರಶೀದಾಳ ತಂದೆ ಕರೀಂ ಉಸ್ಮಾನ್ ವಿರುದ್ಧವೂ ದೂರು ನೀಡಿದ್ದಾಳೆ.
ಪ್ರಕರಣದ ತನಿಖೆ ಈಗ ನಡೆಯುತ್ತಿದೆ.